Back to Top

ಅಪರೂಪದ ಕಾಯಿಲೆ ಬಳಲ್ತಿರುವ ಮಗುವಿಗೆ ಜೀವದೀಪವಾಗಿ ನಿಂತ ಜಾಕ್ವೆಲಿನ್ ಫರ್ನಾಂಡಿಸ್

SSTV Profile Logo SStv September 13, 2025
ಮಗು ನೆರವಿಗೆ ನಿಂತ ಜಾಕ್ವೆಲಿನ್ ಫರ್ನಾಂಡಿಸ್
ಮಗು ನೆರವಿಗೆ ನಿಂತ ಜಾಕ್ವೆಲಿನ್ ಫರ್ನಾಂಡಿಸ್

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಚಿನ್ನದ ಹೃದಯವನ್ನು ಮತ್ತೊಮ್ಮೆ ತೋರಿಸಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳು, ಫ್ಯಾಷನ್ ಶೋಗಳು ಅಥವಾ ವೈಯಕ್ತಿಕ ವಿಚಾರಗಳ ಕಾರಣ ಸುದ್ದಿಯಲ್ಲಿರುವ ಈ ನಟಿ, ಈ ಬಾರಿ ಒಂದು ಮಾನವೀಯ ಕಾರ್ಯಕ್ಕಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೈಡ್ರೋಸೆಫಾಲಸ್ (Hydrocephalus) ಎಂದರೆ ಜಲಮಸ್ತಿಷ್ಕ ರೋಗ. ಇದು ಮಸ್ತಿಷ್ಕದಲ್ಲಿ ನೀರು ತುಂಬುವ ಒಂದು ಗಂಭೀರ ಕಾಯಿಲೆ. ಈ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಬಗ್ಗೆ ತಿಳಿದುಕೊಂಡ ಜಾಕ್ವೆಲಿನ್, ಆ ಮಗುವಿನ ಚಿಕಿತ್ಸೆಗೆ ಬೇಕಾದ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ದುಡ್ಡು ಕೊಡುವುದಷ್ಟೇ ಅಲ್ಲ, ಜಾಕ್ವೆಲಿನ್ ಫರ್ನಾಂಡಿಸ್ ಸ್ವತಃ ಮಗುವನ್ನು ಭೇಟಿ ಮಾಡಿದ್ದಾರೆ. ಆ ಮಗುವಿನ ಜೊತೆಗೆ ಸಾಕಷ್ಟು ಹೊತ್ತು ಸಮಯ ಕಳೆಯುವ ಮೂಲಕ ಆತ್ಮೀಯತೆ ತೋರಿಸಿದ್ದಾರೆ. ನೀರು ಕುಡಿಸಿ, ಪ್ರೋತ್ಸಾಹ ನೀಡಿ ಮಗುವಿಗೆ ಧೈರ್ಯ ತುಂಬಿದ್ದಾರೆ.

ಜಾಕ್ವೆಲಿನ್ ಮಗುವನ್ನು ಭೇಟಿಯಾದ ಈ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಹುಸೇನ್ ಮನ್ಸೂರಿ ಎಂಬ ಮುಂಬೈ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ವಿಷಯವನ್ನು ಜಾಕ್ವೆಲಿನ್ ಅವರಿಗೆ ಪರಿಚಯಿಸಿದವರೂ ಇವರೇ ಆಗಿರಬಹುದು ಎನ್ನಲಾಗುತ್ತಿದೆ.

ಜಾಕ್ವೆಲಿನ್ ಫರ್ನಾಂಡಿಸ್ ಎಷ್ಟು ಆರ್ಥಿಕ ನೆರವು ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮಗುವಿನ ಚಿಕಿತ್ಸೆಗೆ ಸಾಕಷ್ಟು ದುಡ್ಡು ಅಗತ್ಯವಿರುವುದು ನಿಜ. ಈ ನೆರವಿನಿಂದ ಮಗುವಿನ ಆರೋಗ್ಯದಲ್ಲಿ ಶೀಘ್ರ ಸುಧಾರಣೆ ಕಂಡುಬರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಸ್ಟಾರ್‌ಗಳು ತಮ್ಮ ಖ್ಯಾತಿಯಷ್ಟೇ ಸಮಾಜದ ಹಿತಕ್ಕೂ ನಿಂತಾಗ ಅದು ಜನರ ಹೃದಯದಲ್ಲಿ ದೊಡ್ಡ ಸ್ಥಾನ ಪಡೆಯುತ್ತದೆ. ಜಾಕ್ವೆಲಿನ್ ಫರ್ನಾಂಡಿಸ್ ಅವರ ಈ ಕೆಲಸ ಎಲ್ಲರ ಮೆಚ್ಚಿಗೆ ಪಾತ್ರವಾಗಿದೆ. ಅವರ ಈ ಮಾನವೀಯ ಹಾದಿ ಇನ್ನಷ್ಟು ಕಲಾವಿದರಿಗೆ ಪ್ರೇರಣೆ ಆಗಲಿ ಎಂಬುದು ಅಭಿಮಾನಿಗಳ ಆಶಯ.