Back to Top

ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್: ರಿಷಬ್‌ ಶೆಟ್ಟಿ ನಿಜಕ್ಕೂ ಮಾಸ್ಟರ್‌ಪೀಸ್ ಎಂದ ಸಿಂಗರ್

SSTV Profile Logo SStv September 13, 2025
ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್
ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್

‘ಕಾಂತಾರ-ಅಧ್ಯಾಯ 1’ ಕುರಿತ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಕನ್ನಡಿಗರ ಹೃದಯ ಗೆದ್ದ ಈ ಫ್ರಾಂಚೈಸ್‌ಗೆ ಮತ್ತೊಂದು ವಿಶೇಷ ತಿರುವು ಸಿಕ್ಕಿದೆ. ಪಂಜಾಬಿ ಸೂಪರ್‌ಸ್ಟಾರ್ ಗಾಯಕ ದಿಲ್ಜಿತ್ ದೋಸಾಂಜ್ ಅವರು ಕಾಂತಾರ ತಂಡಕ್ಕೆ ಅಧಿಕೃತವಾಗಿ ಕೈಜೋಡಿಸಿರುವುದಾಗಿ ಘೋಷಿಸಿದ್ದಾರೆ. ದಿಲ್ಜಿತ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಿಷಬ್ ಶೆಟ್ಟಿ ಮತ್ತು ಕಾಂತಾರ ಬಗ್ಗೆ ತಮ್ಮ ಭಾವನೆ ಹಂಚಿಕೊಂಡಿದ್ದಾರೆ.

ಅವರು ಬರೆದಿರುವುದು ಹೀಗಿದೆ: “ಅಣ್ಣ ರಿಷಬ್ ಶೆಟ್ಟಿ ಅವರಿಗೆ ನನ್ನ ಸಲಾಂ. ಅವರು ನಿಜಕ್ಕೂ ಮಾಸ್ಟರ್‌ಪೀಸ್. ಮೊದಲ ಕಾಂತಾರ ಚಿತ್ರವನ್ನು ನೋಡಿದಾಗ ಅದು ನನಗೆ ವೈಯಕ್ತಿಕ ನಂಟನ್ನು ಕಟ್ಟಿ ಕೊಟ್ಟಿತ್ತು. ಚಿತ್ರಮಂದಿರದಲ್ಲಿ ವರಾಹ ರೂಪಂ ಹಾಡು ಬಂದಾಗ ನಾನು ಆನಂದಬಾಷ್ಪದಿಂದ ಕಣ್ಣೀರು ಹಾಕಿದ್ದೆ.”

ಈ ಬಾರಿ, ದಿಲ್ಜಿತ್ ಸಿಂಗ್ ಕಾಂತಾರ-ಅಧ್ಯಾಯ 1ರ ಸಂಗೀತ ಆಲ್ಬಮ್‌ನಲ್ಲಿ ಭಾಗಿಯಾಗಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಅವರು ಬಹು ಸಂತೋಷದಿಂದ ಹಂಚಿಕೊಂಡಿದ್ದಾರೆ.
“ಕೇವಲ ಒಂದೇ ದಿನದಲ್ಲಿ ಅಜನೀಶ್ ಅವರಿಂದ ತುಂಬಾ ಕಲಿಯುವ ಅವಕಾಶ ಸಿಕ್ಕಿತು” ಎಂದು ದಿಲ್ಜಿತ್ ಹೇಳಿದ್ದಾರೆ.

ದಿಲ್ಜಿತ್ ಎಂಟ್ರಿ ಬಗ್ಗೆ ಸಂತಸ ವ್ಯಕ್ತಪಡಿಸಿದ ರಿಷಬ್ ಶೆಟ್ಟಿ, “ನಮ್ಮ ತಂಡಕ್ಕೆ ಮತ್ತೊಬ್ಬ ಶಿವಭಕ್ತ ಸೇರಿಕೊಂಡಿದ್ದಾನೆ. ಕಾಂತಾರ ಅಧ್ಯಾಯ 1 ಇನ್ನಷ್ಟು ಬಲಿಷ್ಠವಾಗಿದೆ” ಎಂದು ಹೇಳಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ-ಗಾಯಕ ದಿಲ್ಜಿತ್ ದೋಸಾಂಜ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮೈತ್ರಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ #KantaraChapter1 ಟ್ರೆಂಡ್ ಆಗುತ್ತಿದೆ.

ಕಾಂತಾರ-ಅಧ್ಯಾಯ 1 ಈಗಾಗಲೇ ಕಥೆ, ತತ್ವ ಮತ್ತು ಸಂಸ್ಕೃತಿಯ ಮೂಲಕ ಜನರನ್ನು ಸೆಳೆಯುತ್ತಿದ್ದು, ಇದೀಗ ದಿಲ್ಜಿತ್ ಸಿಂಗ್ ಸಂಗೀತದ ಮೂಲಕ ಹೊಸ ಮಾಯೆ ತರಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ.