Back to Top

"ನನ್ನ ಮನೆ ಚಂದನವನವಾಗಿತ್ತು, ಈಯಮ್ಮ ಬಂದ ಮೇಲೆ ಹಾಳಾಯಿತು" – ಸೊಸೆ ಬಗ್ಗೆ ಎಸ್ ನಾರಾಯಣ್ ಹೇಳಿದ್ದೇನು?

SSTV Profile Logo SStv September 12, 2025
ಎಸ್. ನಾರಾಯಣ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್!
ಎಸ್. ನಾರಾಯಣ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್!

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎಸ್. ನಾರಾಯಣ ಅವರ ಕುಟುಂಬ ಇದೀಗ ದೊಡ್ಡ ವಿವಾದದಲ್ಲಿ ಸಿಲುಕಿದೆ. ಅವರ ಸೊಸೆ ಪವಿತ್ರಾ ಅವರು, ವರದಕ್ಷಿಣೆ ಕಿರುಕುಳ ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದು, ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಸ್. ನಾರಾಯಣ, ಅವರ ಪತ್ನಿ ಭಾಗ್ಯವತಿ ಮತ್ತು ಮಗ ಪವನ್ ವಿರುದ್ಧ ಕೇಸ್ ದಾಖಲಾಗಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಸೊಸೆಯ ಆರೋಪಕ್ಕೆ ನಾರಾಯಣನ ಪ್ರತಿಕ್ರಿಯೆ, "ಯಾವುದೇ ಹೆಣ್ಣುಮಗುವನ್ನ ನೋಯಿಸಲು ನಾನು ಇಷ್ಟ ಪಡಲ್ಲ. ವರದಕ್ಷಿಣೆಗಿಂತ ಹೆಚ್ಚಿನ ಹಣ ಕೊಟ್ಟಿದ್ದೇನೆ ಎಂದು ಸೊಸೆ ಆರೋಪಿಸಿದ್ದಾಳೆ. ನಾನು ವಿಧಾನಸೌಧ ಖರೀದಿ ಮಾಡುತ್ತೇನೆ ಎಂದರೆ ಯಾರೂ ನಂಬುವುದಿಲ್ಲ. ಹಾಗಿದ್ದರೆ, ಅವರ ಮಾತನ್ನೆಲ್ಲ ನಂಬೋದು ಹೇಗೆ?" ಎಂದು ಪ್ರಶ್ನಿಸಿದ್ದಾರೆ.

ನಾರಾಯಣ ಅವರು ಹೇಳುವಂತೆ, 14 ತಿಂಗಳಿನಿಂದ ಸೊಸೆ ಪವಿತ್ರಾ ತಮ್ಮ ಜೊತೆ ಇಲ್ಲ. ಮಗುವಿಗಾಗಿ ತಾವು ಸಹನೆ ತೋರಿದ್ದೇವೆ ಎಂದು ಅವರು ವಿವರಿಸಿದ್ದಾರೆ. "ಮಗುವಿನ ಬಳಿ ಹೋಗಲು ಪ್ರಯತ್ನಿಸಿದ್ದಾಗ ನಮ್ಮನ್ನ ಅವಮಾನ ಮಾಡಿ ಹೊರಗೆ ನಿಲ್ಲಿಸಿದ್ದಾರೆ. ಮದುವೆ ತುಂಬ ಅದ್ಧೂರಿಯಾಗಿ ಮಾಡಿದ್ದೇನೆ. ನಾನು ಯಾಕೆ ಹಣ ಕೇಳಲಿ?" ಎಂದು ಸ್ಪಷ್ಟಪಡಿಸಿದ್ದಾರೆ.

ನಾರಾಯಣ ಅವರ ಪ್ರಕಾರ, ಪವಿತ್ರಾ ಮತ್ತು ಪವನ್ ಇಬ್ಬರೂ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಲವ್ ಆಗಿ ಮದುವೆ ಆಯಿತು. "ನಾನು ಹೇಳಿದ್ನಾ ನನ್ನ ಮಗನನ್ನು ಲವ್ ಮಾಡು ಅಂತ? ಲವ್ ಮಾಡಿದಾಗಲೇ ಅವನ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕಾಗಿತ್ತು. ಒಪ್ಪಿಕೊಂಡು ಬಂದ ನಂತರ, ನಾವು ಯಾವ ವಿರೋಧವೂ ಮಾಡಿಲ್ಲ. ಸಂತೋಷದಿಂದ ಮದುವೆ ಮಾಡಿದ್ದೇವೆ." ಎಂದು ನಾರಾಯಣ ಗರಂ ಆಗಿ ಹೇಳಿದ್ದಾರೆ.

ನಾರಾಯಣ ಅವರ ಆರೋಪ ಪ್ರಕಾರ, ಸೊಸೆ ಮನೆಗೆ ಬಂದ ನಂತರ ಕುಟುಂಬದ ಶಾಂತಿ ಹಾಳಾಗಿದೆ. "ನಮ್ಮ ಮನೆ ಯಾವತ್ತೂ ಚಂದನವನ. ನಗು-ನಗುತಾ ಇದ್ದೀವಿ. ಈಯಮ್ಮ ಬಂದ ಮೇಲೆ ಊಟಕ್ಕೂ ಗಂಡನ ಜೊತೆ ರೂಮಿಗೆ ಹೋಗಿ ತಟ್ಟೆ ತೆಗೆದುಕೊಂಡು ಹೋಗುತ್ತಿದ್ದಳು. ಸಣ್ಣ ವಿಷಯಕ್ಕೂ ಸೂಸೈಡ್ ನೋಟು ಬರೆಯುತ್ತಿದ್ದರು. ಇದರಿಂದ ಮನೆಯ ವಾತಾವರಣ ಗಲಾಟೆಯಾಯಿತು." ಎಂದು ಹೇಳಿದ್ದಾರೆ.

ನಾರಾಯಣ ಅವರು ತಮ್ಮ ಹೋರಾಟದ ದಿನಗಳನ್ನು ನೆನೆದು, "500 ರೂ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಶುರು ಮಾಡಿ ಇಂದಿನ ಮಟ್ಟಿಗೆ ಬಂದಿದ್ದೇನೆ. ಬದುಕುಬೇಕು ಅನ್ನುವ ಛಲ ಇರಬೇಕು. ಇವರು ಏನೇ ಮಾಡಿದರೂ ನನ್ನ ಹೆಸರಿಗೆ ಮಸಿ ಬಳಿಯೋದಿಲ್ಲ." ಎಂದು ಗಟ್ಟಿಯಾಗಿ ಹೇಳಿದ್ದಾರೆ. ಎಸ್. ನಾರಾಯಣ ಕುಟುಂಬದಲ್ಲಿ ಉಂಟಾದ ಈ ಕಲಹ ಇದೀಗ ಕಾನೂನು ಹಾದಿ ಹಿಡಿದಿದೆ. ಸೊಸೆ ಪವಿತ್ರಾ ಮಾಡಿದ ಆರೋಪ ಗಂಭೀರವಾಗಿದ್ದು, ನಾರಾಯಣ ಅವರ ತೀವ್ರ ಪ್ರತಿಕ್ರಿಯೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.