Back to Top

"ಯಾಕೆ ಪಾಕಿಸ್ತಾನಿ ಆರೋಪಿಗಳಿಗೆ ಸೌಕರ್ಯ, ದರ್ಶನ್‌ಗೆ ಮಾತ್ರ ಅನ್ಯಾಯ?" ಜೈಲಾಧಿಕಾರಿಗಳ ವಿರುದ್ಧ ಲಾಯರ್ ಸುನಿಲ್ ವಾದ

SSTV Profile Logo SStv September 17, 2025
ಜೈಲಾಧಿಕಾರಿಗಳ ವಿರುದ್ಧ ಲಾಯರ್ ಸುನಿಲ್ ವಾದ
ಜೈಲಾಧಿಕಾರಿಗಳ ವಿರುದ್ಧ ಲಾಯರ್ ಸುನಿಲ್ ವಾದ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಪರದಾಡುತ್ತಿದ್ದಾರೆ ಎಂಬ ಆರೋಪ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ದರ್ಶನ್ ಪರ ವಕೀಲ ಸುನೀಲ್ ಕುಮಾರ್, ಜೈಲಾಧಿಕಾರಿಗಳ ವಿರುದ್ಧ ತೀವ್ರ ವಾದ ಮಂಡಿಸಿದ್ದು, ಸೆಪ್ಟೆಂಬರ್ 19ರಂದು ಈ ವಿಷಯದಲ್ಲಿ ಕೋರ್ಟ್ ತೀರ್ಪು ಬರಬಹುದೆಂಬ ನಿರೀಕ್ಷೆ ಇದೆ.

ವಕೀಲ ಸುನೀಲ್ ಕುಮಾರ್ ಅವರ ಪ್ರಕಾರ, ಕೋರ್ಟ್ ಆದೇಶ ನೀಡಿದರೂ ದರ್ಶನ್‌ಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. "ಪಾಕಿಸ್ತಾನದ ಆರೋಪಿಗಳಿಗೆ ಚೆಸ್, ಕೇರಂ, ಮೂಲಸೌಕರ್ಯಗಳೆಲ್ಲವಿದೆ. ಆದರೆ ನಮ್ಮ ಆರೋಪಿಗೆ ಅಂಥದ್ದೇ ಸೌಲಭ್ಯ ಸಿಗುತ್ತಿಲ್ಲ. ಕೋರ್ಟ್ ಆದೇಶವನ್ನೇ ಕಡೆಗಣಿಸುತ್ತಿದ್ದಾರೆ" ಎಂದು ವಾದಿಸಿದ್ದಾರೆ. ದರ್ಶನ್‌ನ್ನು ಕ್ವಾರೆಂಟೈನ್‌ನಲ್ಲಿ ಇಟ್ಟಿರುವುದು ತಾರತಮ್ಯದ ನಿರ್ಣಯ ಎಂದು ವಕೀಲರು ಪ್ರಶ್ನಿಸಿದ್ದಾರೆ.

"ಫ್ಯಾಮಿಲಿ ಮತ್ತು ವಕೀಲರ ಭೇಟಿಗೆ ಅವಕಾಶ ಕೊಡಬೇಕು. ಇದು ನಿಯಮ. ಆದರೆ ಅನುಮತಿ ಕೊಡಲಾಗುತ್ತಿಲ್ಲ. ಜೈಲಿನ ಅಧಿಕಾರಿಗಳು ಬೇಕೆಂದೇ ಹಿಂಸೆ ಕೊಡುತ್ತಿದ್ದಾರೆ" ಎಂದು ಆರೋಪ ಮಾಡಿದ್ದಾರೆ.

ಸರ್ಕಾರದ ಪರವಾಗಿ ವಕೀಲ ಸಚಿನ್ ಪ್ರತಿವಾದ ಮಾಡಿದ್ದು:

  • ಜೈಲಿನ ನಿಯಮಾವಳಿ ಪ್ರಕಾರವೇ ದರ್ಶನ್‌ಗೆ ಸೌಲಭ್ಯ ನೀಡಲಾಗಿದೆ.
  • ಕಂಬಳಿ, ಬ್ಲಾಂಕೆಟ್, ಲೋಟ ಸೇರಿದಂತೆ ಅಗತ್ಯ ಸೌಲಭ್ಯ ನೀಡಲಾಗಿದೆ.
  • ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ವಾಕಿಂಗ್ ಅವಕಾಶ ನೀಡಲಾಗಿದೆ.
  • "ಕ್ವಾರೆಂಟೇನ್ ಎಂಬ ನಿಯಮ ಈಗಿಲ್ಲ. SOP ಪ್ರಕಾರ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.

ದರ್ಶನ್ ಪರ ವಕೀಲರು, "ಎಲ್ಲದರ ಸಾಕ್ಷಿ ನೀಡಲಿ. ದಾಖಲೆಗಳನ್ನು ತೋರಿಸಲಿ. ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ" ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಕೋರ್ಟ್ ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ್ದು, ಸೆಪ್ಟೆಂಬರ್ 19ರಂದು ನ್ಯಾಯಾಂಗ ನಿಂದನೆ ಅರ್ಜಿಯ ಕುರಿತಂತೆ ನಿರ್ಧಾರ ಹೊರಬರಲಿದೆ. ದರ್ಶನ್ ಕೇಳಿದ ಸೌಲಭ್ಯಗಳು ಒದಗಿಸಲಾಗುತ್ತದೆಯೋ ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ.

ಈ ಪ್ರಕರಣದಲ್ಲಿ ದರ್ಶನ್ ಸೆಲೆಬ್ರಿಟಿ ಆರೋಪಿ ಎಂಬ ಕಾರಣದಿಂದಲೂ ಪ್ರಕರಣದ ಪ್ರತಿ ಹಂತವೂ ಜನರ ಕಣ್ಣಲ್ಲಿ ಬೀಳುತ್ತಿದೆ. ಕೋರ್ಟ್ ತೀರ್ಪು ಏನಾಗುತ್ತದೋ ನೋಡಬೇಕಾಗಿದೆ.