Back to Top

ಕೊತ್ತಲವಾಡಿ ಸಂಭಾವನೆ ವಿವಾದ: ನಟಿ ಸ್ವರ್ಣ ಬಾಯ್ಬಿಟ್ಟಿದ್ದಾರೆ – “ನಮಗೆ ಕಣ್ಣೀರು ಹಾಕಿಸಿದ್ದಾರೆ, ಕರ್ಮ ಬಿಡೋದಿಲ್ಲ”

SSTV Profile Logo SStv September 17, 2025
ಸ್ವರ್ಣ ವಿಡಿಯೋ ಮೂಲಕ ಸ್ಫೋಟಕ ಹೇಳಿಕೆ
ಸ್ವರ್ಣ ವಿಡಿಯೋ ಮೂಲಕ ಸ್ಫೋಟಕ ಹೇಳಿಕೆ

‘ಕೊತ್ತಲವಾಡಿ’ ಸಿನಿಮಾ ಬಿಡುಗಡೆಯಾದ ನಂತರ ಕಲಾವಿದರಿಗೆ ಸಂಭಾವನೆ ನೀಡದಿರುವ ವಿಚಾರ ದಿನದಿಂದ ದಿನಕ್ಕೆ ತೀವ್ರವಾಗಿ ಬೆಳೆಯುತ್ತಿದೆ. ಈ ವಿಷಯದಲ್ಲಿ ನಟಿ ಸ್ವರ್ಣ ತಮ್ಮ ನೋವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ವಿಡಿಯೋ ಮೂಲಕ ಮಾತನಾಡಿದ ಸ್ವರ್ಣ, ಸಿನಿಮಾ ಶೂಟಿಂಗ್‌ನಲ್ಲಿ ತಮ್ಮ ಶ್ರಮದ ಬಗ್ಗೆ ಹೇಳಿಕೊಂಡಿದ್ದಾರೆ. “ನಾನು 48 ಸಾವಿರ ರೂಪಾಯಿಗೆ ನಟಿಸಲು ಒಪ್ಪಿಕೊಂಡಿದ್ದೆ. ಆದರೆ ನನಗೆ ಬಂದಿದ್ದು ಕೇವಲ 35 ಸಾವಿರ ರೂ. ಅದೂ ತಾಯಿ ಗೋಳಾಡಿದ ಮೇಲೆ. ಇನ್ನೂ ಬಾಕಿ ಹಣ ಬಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ನಿರ್ದೇಶಕ ಶ್ರೀರಾಜ್ ಹೇಳಿರುವ “ಕಲಾವಿದರು ಯಶ್ ತಾಯಿ ನಿರ್ಮಾಪಕಿ ಅನ್ನೋದರಿಂದ ದುರಾಸೆಗೆ ಬಿದ್ದಿದ್ದಾರೆ” ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸ್ವರ್ಣ, “ನಾನು ದುರಾಸೆಗೆ ಬಿದ್ದಿದ್ದರೆ ಲಕ್ಷಲಕ್ಷ ಕೇಳಬಹುದಿತ್ತು. ನಾನು ಸಿಂಗಲ್ ಪೇರೆಂಟ್ ಮಗಳು. ಮೊದಲು ಮಾತನಾಡಿದ್ದಷ್ಟು ಹಣವನ್ನಾದರೂ ಕೊಡಿ ಎಂದು ಕೇಳಿದ್ದೇನೆ ಅಷ್ಟೇ” ಎಂದಿದ್ದಾರೆ.

ಸ್ವರ್ಣ ತಮ್ಮ ಮಾತಿನಲ್ಲಿ ನಿರ್ಮಾಪಕಿ ಪುಷ್ಪ (ಯಶ್ ತಾಯಿ) ಕುರಿತು ಸಹ ಪ್ರಸ್ತಾಪಿಸಿ, “ನಮ್ಮ ಚಿತ್ರದ ನಿರ್ಮಾಪಕರಿಗೆ ಅನ್ಯಾಯವಾಗಿದೆ. ಅದೇ ಗೊತ್ತಾಗಲಿ ಅಂದೇ ನಾನು ಇಷ್ಟೆಲ್ಲಾ ಮಾಡುತ್ತಿದ್ದೇನೆ. ನಮ್ಮ ಕೆಲ ಕಲಾವಿದರಿಗೆ ಇನ್ನೂ ದುಡ್ಡು ಬಂದಿಲ್ಲ. ಅವರಿಗೆ ಹೇಳೋಕೆ ಭಯವಾಗಿದೆ. ನಾನು ಹೋರಾಡುತ್ತೇನೆ” ಎಂದಿದ್ದಾರೆ.

“ನಿರ್ದೇಶಕರಿಗೂ, ಅವರ ಪತ್ನಿಗೂ ಕರೆ ಮಾಡಿದ್ದೆ. ಆದರೆ ಅವರು ನನ್ನ ಮೇಲೆ ಅನ್ಯಾಯ ಮಾಡಿದ್ದಾರೆ. ನಮಗೆ ಕಣ್ಣೀರು ಹಾಕಿಸಿದ್ದಾರೆ. ಕರ್ಮ ಎಂಬುದು ಬಿಡುವುದಿಲ್ಲ. ಅವರ ಬಳಿ ಹಣ ಇರಬಹುದು, ಆದರೆ ಕರ್ಮ ಅವರನ್ನು ಬಿಡೋದಿಲ್ಲ” ಎಂದು ಕಿಡಿಕಾರಿದ್ದಾರೆ.

‘ಕೊತ್ತಲವಾಡಿ’ ಸಿನಿಮಾ ಬಿಡುಗಡೆ ಆಗಿ ಒಟಿಟಿಗೂ ಬಂದಿದ್ದರೂ, ಸಂಭಾವನೆ ವಿವಾದದಿಂದಾಗಿ ಸಿನಿಮಾ ಈಗ ಹೆಚ್ಚು ಸುದ್ದಿಯಲ್ಲಿದೆ. ನಟಿ ಸ್ವರ್ಣ ಮಾಡಿದ ಆರೋಪಗಳು ಸತ್ಯವೋ ಅಥವಾ ನಿರ್ದೇಶಕ ಶ್ರೀರಾಜ್ ಅವರ ಮಾತುಗಳಲ್ಲಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ. ಆದರೆ ಈ ಪ್ರಕರಣ ಈಗ ಸಿನಿಮಾ ಹಿನ್ನಲೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.