Back to Top

ಬಿಡುಗಡೆಗೆ ರೆಡಿ ಖಾಲಿ ಡಬ್ಬ..ಇದೇ ವಾರ ಹೊಸಬರ ಸಿನಿಮಾ ತೆರೆಗೆ ಎಂಟ್ರಿ!

SSTV Profile Logo SStv September 17, 2025
ಈ ವಾರ ರಾಜ್ಯಾದ್ಯಂತ ರಿಲೀಸ್ ಆಗುತ್ತಿರುವ ‘ಖಾಲಿ ಡಬ್ಬ’
ಈ ವಾರ ರಾಜ್ಯಾದ್ಯಂತ ರಿಲೀಸ್ ಆಗುತ್ತಿರುವ ‘ಖಾಲಿ ಡಬ್ಬ’

ಹೊಸಬರ ಪ್ರಯತ್ನದ ಖಾಲಿ ಡಬ್ಬ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಿದೆ. ಈ ಕುರಿತ ಸುದ್ದಿಗೋಷ್ಟಿಯನ್ನು ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಪ್ರಕಾಶ್ ಕೆ ಅಂಬ್ಳೆ ಮಾತನಾಡಿ, ಪಾತ್ರದೊಳಗಿನ ಪಾತ್ರಧಾರಿ ಅಂದರೆ ಅದು ಖಾಲಿ ಡಬ್ಬ. ಖಾಲಿ ಡಬ್ಬದಲ್ಲಿ ಒಂದಷ್ಟು ವಿಶೇಷ ಇರುತ್ತದೆ. ಅದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈ ಸಿನಿಮಾ ರಿಲೀಸ್ ವರೆಗೂ ಬರಲು ಕಾರಣ ನಿರ್ಮಾಪಕ ಮಂಜು ಗುರಪ್ಪ. ಅವರ ಸಪೋರ್ಟ್ ನಮಗೆ ಸಿಕ್ಕಿದೆ. ಸಾಹಿತ್ಯ, ಸಂಗೀತವನ್ನು ವಿ ನಾಗೇಂದ್ರ ಪ್ರಸಾದ್ ಸರ್ ಬರೆದಿದ್ದಾರೆ. ನಾಯಕ ರಾಮ್ ಗುಡಿ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.

ನಟ ರಾಮ್ ಗುಡಿ ಮಾತನಾಡಿ, ಖಾಲಿ ಡಬ್ಬದಲ್ಲಿ ತುಂಬಾ ವಿಷಯಗಳನ್ನು ಹೇಳಲಾಗಿದೆ. ನಿಮಗೆಲ್ಲಾ ಅಜ್ಜಿ ನೆನಪು ತಂದುಕೊಡುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ‌ ನಿರ್ಧಾರ ತೆಗೆದುಕೊಂಡರೆ ಜೀವನ ಡಬ್ಬ ತುಂಬುತ್ತದೆ ಎಂಬ ಎಳೆ ಇಟ್ಕೊಂಡು ಮಾಡಲಾಗಿದೆ. ಹೊಸಬರ ಸಿನಿಮಾ ರಿಲೀಸ್ ಮಾಡುವುದೇ ದೊಡ್ಡ ಚಾಲೆಂಜ್. ಅದಕ್ಕೆ ನಿಮ್ಮ ಸಪೋರ್ಟ್ ಇರಲಿ ಎಂದರು.

ವಿ. ನಾಗೇಂದ್ರ ಪ್ರಸಾದ್ ಮಾತನಾಡಿ, ಈ ಸಿನಿಮಾದಲ್ಲಿ ನಾಗೇಂದ್ರ ಪ್ರಸಾದ್ ಆಗಿಯೇ ನಟಿಸಿದ್ದೇನೆ. ಕನ್ನಡ,  ಸಾಹಿತ್ಯದ ಬಗ್ಗೆ ಮಾತನಾಡುತ್ತೇನೆ. ಸಿನಿಮಾ ನೋಡ್ತಾ ನೋಡ್ತಾ ಟೈಟಲ್ ಮರೆತು ಹೋಗುತ್ತದೆ. ಈ ಚಿತ್ರ ಎಲ್ಲಿಯೂ ಬೇಸರ ತರಿಸಲ್ಲ. ನಿರೂಪಣೆ ಹೊಸದಾಗಿದೆ ಎಂದರು.

ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಪ್ರಕಾಶ್ ಕೆ ಅಂಬ್ಳೆ ಚೊಚ್ಚಲ ಪ್ರಯತ್ನದ ಖಾಲಿ ಡಬ್ಬ ಸಿನಿಮಾದಲ್ಲಿ ರಾಮ್ ಗುಡಿ ನಾಯಕನಾಗಿ ನಟಿಸಿದ್ದಾರೆ. ಆದ್ಯಾ ಪ್ರಿಯಾ, ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಕುರಿ ಪ್ರತಾಪ್, ಮಜಾಭಾರತ ಸೀತಾರಾಮ್, ಸುಧಾ, ಹನುಮಕ್ಕ ಹಾಗೂ ವಿ. ನಾಗೇಂದ್ರ ಪ್ರಸಾದ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾಗೇಂದ್ರ ಪ್ರಸಾದ್, ವಿಶೇಷ ಪಾತ್ರದ ಜೊತೆಗೆ ಈ ಚಿತ್ರಕ್ಕೆ ಸಾಹಿತ್ಯ ಬರೆದು, ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ.

ಎಸ್ ಯು ಎ ಎಂಟರ್​ಟೈನ್ಮೆಂಟ್ ಅಡಿ ಮಂಜು ಗುರಪ್ಪ ನಿರ್ಮಾಣ ಮಾಡಿದ್ದು, ಅಪ್ಪಾಜಿ, ಸೌಮ್ಯಾ ರಾಮ್, ಲಕ್ಷ್ಮೀ ಮಹೇಂದ್ರ, ಚಿಕ್ಕೇಗೌಡ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಲಕ್ಕಿ ಕ್ಯಾಮರಾ ಹಿಡಿದಿದ್ದು, ವೆಂಕಟ್ ಯುಡಿವಿ ಸಂಕಲನ ನಿರ್ವಹಿಸಿದ್ದಾರೆ. ಗಿರೀಶ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಇದೇ ವಾರ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.