Back to Top

"ನನ್ನ ಹೊಟ್ಟೆಯಲ್ಲಿ ಮಗುವನ್ನು ಹೊರಲು ಇಷ್ಟವಿರಲಿಲ್ಲ" – ತಾಯ್ತನದ ಬಗ್ಗೆ ಮುಕ್ತವಾಗಿ ಮಾತಾಡಿದ ಸನ್ನಿ ಲಿಯೋನ್

SSTV Profile Logo SStv August 30, 2025
ತಾಯ್ತನದ ಎರಡು ದಾರಿಯ ಕಥೆ ಹಂಚಿಕೊಂಡ ಸನ್ನಿ ಲಿಯೋನ್
ತಾಯ್ತನದ ಎರಡು ದಾರಿಯ ಕಥೆ ಹಂಚಿಕೊಂಡ ಸನ್ನಿ ಲಿಯೋನ್

ಮಾಜಿ ನೀಲಿತಾರೆ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಹೆಸರು ಕೇಳದವರು ವಿರಳ. ಒಮ್ಮೆ ಗ್ಲಾಮರ್ ಇಂಡಸ್ಟ್ರಿ ಕಂಗೊಳಿಸಿದ ಸನ್ನಿ, ಇದೀಗ ಕುಟುಂಬ ಜೀವನ, ಮಕ್ಕಳ ಪೋಷಣೆ ಹಾಗೂ ದಕ್ಷಿಣದ ಸಿನಿಮಾಗಳಲ್ಲಿ ತಮ್ಮದೇ ಆದ ಹಾದಿಯನ್ನು ರೂಪಿಸಿಕೊಂಡಿದ್ದಾರೆ. ಇತ್ತೀಚೆಗೆ ನಟಿ ಸೋಹಾ ಅಲಿಖಾನ್ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ ಸನ್ನಿ, ತಮ್ಮ ವೈಯಕ್ತಿಕ ಜೀವನದ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ದತ್ತು ಹಾಗೂ ಸಾರೋಗಸಿ ಮೂಲಕ ತಾಯಿಯಾದ ತಮ್ಮ ಅನುಭವ.

ಸನ್ನಿ ಹಾಗೂ ಅವರ ಪತಿ ಡೇನಿಯಲ್ ವೆಬರ್, 2017ರಲ್ಲಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಅನಾಥಾಶ್ರಮದಿಂದ ನಿಶಾ ಎಂಬ ಬಾಲಕಿಯನ್ನು ದತ್ತು ಪಡೆದರು. ಆ ಸಮಯದಲ್ಲಿ ಆಕೆ ಕೇವಲ 21 ತಿಂಗಳವಳಾಗಿದ್ದಳು. "ನನ್ನ ಪ್ರೆಗ್ನೆನ್ಸಿ ಜರ್ನಿ ಸುಲಭವಾಗಿರಲಿಲ್ಲ. ಹಲವಾರು ಬಾರಿ IVF ಪ್ರಯತ್ನಿಸಿದ್ದೆವು. ಆದರೆ ಫಲಿತಾಂಶ ಸಿಗಲಿಲ್ಲ. ಅದೇ ದಿನ, ನಿಶಾಳನ್ನು ದತ್ತು ಪಡೆಯುವ ಅವಕಾಶ ಸಿಕ್ಕಿತು. ಇದು ನಮ್ಮ ಜೀವನದ ಸುಂದರ ಕ್ಷಣ."

“ನೀವು ದತ್ತು ಪಡೆದಿದ್ದರೂ ಸಾರೋಗಸಿಗೆ ಏಕೆ ಮುಂದಾದಿರಿ?” ಇದಕ್ಕೆ ಸನ್ನಿಯ ನೇರ ಉತ್ತರ: “ನಾನು ಸ್ವತಃ ಗರ್ಭ ಧರಿಸಿ ಮಗುವನ್ನು ಹೊತ್ತುಕೊಳ್ಳಲು ಬಯಸಲಿಲ್ಲ. ಆದ್ದರಿಂದ ನಾವು ಸಾರೋಗಸಿಯನ್ನು ಆಯ್ಕೆ ಮಾಡಿಕೊಂಡೆವು.” ಸನ್ನಿ ಲಿಯೋನ್ ಸಾರೋಗಸಿ ಪ್ರಕ್ರಿಯೆಯ ಖರ್ಚಿನ ಬಗ್ಗೆ ಕೂಡ ಬಾಯಿಬಿಟ್ಟಿದ್ದಾರೆ. "ನಾವು ಆಯ್ಕೆ ಮಾಡಿಕೊಂಡ ಬಾಡಿಗೆ ತಾಯಿಗೆ ವಾರಕ್ಕೊಮ್ಮೆ ಹಣ ನೀಡುತ್ತಿದ್ದೆವು. ಆಕೆಯ ಪತಿಗೂ ಸಹಾಯ ಮಾಡುತ್ತಿದ್ದೆವು. ಆ ಹಣದಿಂದ ಆಕೆ ಒಂದು ಮನೆ ಕಟ್ಟಿಸಿಕೊಂಡಳು. ಹೌದು, ಇದು ಬಹಳ ದುಬಾರಿ ಪ್ರಕ್ರಿಯೆ."

2011ರಲ್ಲಿ ಬಿಗ್ ಬಾಸ್ ಸೀಸನ್ 5 ಮೂಲಕ ಭಾರತೀಯ ಟಿವಿಯಲ್ಲಿ ಕಾಲಿಟ್ಟ ಸನ್ನಿ, ನಂತರ ಬಾಲಿವುಡ್‌ನ ‘ಜಿಸ್ಮ್-2’ ಮೂಲಕ ಬೆಳ್ಳಿ ಪರದೆಗೆ ಬಂದರು. ಐಟಂ ಸಾಂಗ್‌ಗಳು, ಹಾಟ್ ದೃಶ್ಯಗಳು, ಮತ್ತು ಗ್ಲಾಮರ್ ಇಮೇಜ್ ಮೂಲಕ ಜನಪ್ರಿಯರಾದರು. ಆದರೆ, ಇಂದಿನ ಸನ್ನಿ ಲಿಯೋನ್ ಸಂಪೂರ್ಣ ಭಿನ್ನರು. ಮೂರು ಮಕ್ಕಳ ತಾಯಿ, ಕುಟುಂಬದ ಜೊತೆ ಸಮಯ ಕಳೆಯುವ ತಾಯಿ, ಮತ್ತು ದಕ್ಷಿಣದ ಸಿನಿಮಾಗಳಲ್ಲಿ ನಟನೆಯತ್ತ ತಿರುಗಿಕೊಂಡ ಕಲಾವಿದೆ.

ಕನ್ನಡದಲ್ಲಿ ಅವರು ಮೊದಲು ಜೋಗಿ ಪ್ರೇಮ್ ನಿರ್ದೇಶನದ ‘DK’ ಸಿನಿಮಾದ ಹಾಡಿನಲ್ಲಿ ಹೆಜ್ಜೆ ಹಾಕಿದರು. ನಂತರ ‘ಲವ್ ಯು ಆಲಿಯಾ’, ‘ಚಾಂಪಿಯನ್’ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು. ಈಗ ‘ರಂಗೀಲಾ’, ‘ಶೇರೊ’ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಬಯೋಪಿಕ್‌ನಲ್ಲಿಯೂ ಬಣ್ಣ ಹಚ್ಚಿದ್ದಾರೆ.

ಸನ್ನಿ ಲಿಯೋನ್ ಅವರ ತೀರ್ಮಾನಗಳು ಹಲವರಿಗೆ ಚರ್ಚೆಯ ವಿಷಯವಾದರೂ, ತಾಯ್ತನದ ವಿಷಯದಲ್ಲಿ ಅವರು ತೋರಿಸಿದ ಸ್ಪಷ್ಟ ನಿಲುವು ಪ್ರಾಮಾಣಿಕ. "ಮಗು ದತ್ತು ಪಡೆಯುವುದೂ, ಸಾರೋಗಸಿಯೂ ಇವು ನಮ್ಮ ಜೀವನದ ಸುಂದರ ಆಯ್ಕೆಗಳು" ಎಂಬ ಅವರ ಮಾತು, ಸಮಾಜದಲ್ಲಿ ದತ್ತು ಮತ್ತು ಸಾರೋಗಸಿಯ ಬಗ್ಗೆ ಇರುವ ಕಲ್ಪನೆಗಳಿಗೆ ಹೊಸ ಅರ್ಥ ನೀಡುತ್ತದೆ.