Back to Top

ಜೈಲಿನಲ್ಲಿ ಮಾನವೀಯ ಹಕ್ಕು ಕಸಿದುಕೊಂಡರಾ? ದರ್ಶನ್ ಸ್ಥಿತಿಗೆ ತರುಣ್ ಸುಧೀರ್ ಕಣ್ಣೀರಾದ ಹೇಳಿಕೆ

SSTV Profile Logo SStv September 11, 2025
ದರ್ಶನ್‌ ಸ್ಥಿತಿಗೆ ಆಪ್ತ ತರುಣ್ ಸುಧೀರ್ ಬೇಸರ
ದರ್ಶನ್‌ ಸ್ಥಿತಿಗೆ ಆಪ್ತ ತರುಣ್ ಸುಧೀರ್ ಬೇಸರ

ಕನ್ನಡ ಚಿತ್ರರಂಗದ "ಚಾಲೆಂಜಿಂಗ್ ಸ್ಟಾರ್" ದರ್ಶನ್‌ ಸದ್ಯ ಕೋರ್ಟ್ ಹಾಗೂ ಜೈಲು ನಡುವಿನ ಹೋರಾಟದಲ್ಲಿ ಸಾಗುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ ಇತ್ತೀಚೆಗೆ ಸೆಷನ್ಸ್ ಕೋರ್ಟ್‌ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ವೇಳೆ, ತಮಗೆ ವಿಷ ಕೊಡುವಂತೆ ಬೇಡಿಕೊಂಡು ಎಲ್ಲರನ್ನೂ ಬೆಚ್ಚಿಬೀಳಿಸಿದರು. ಈ ಘಟನೆ ದರ್ಶನ್‌ ಅಭಿಮಾನಿಗಳಿಗೆ ಮಾತ್ರವಲ್ಲ, ಅವರ ಆಪ್ತರಿಗೂ ಆಘಾತ ತಂದಿದೆ. ವಿಶೇಷವಾಗಿ, ದರ್ಶನ್‌ಗೆ ಹತ್ತಿರವಾಗಿರುವ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ತರುಣ್ ಸುಧೀರ್, “ದರ್ಶನ್ ತುಂಬಾ ಸ್ಟ್ರಾಂಗ್ ವ್ಯಕ್ತಿತ್ವದವರು. ಅಂಥವರೇ ಹೀಗೆ ವಿಷ ಕೇಳ್ತಾರೆ ಅಂದ್ರೆ, ಅವರು ಎಷ್ಟು ನೊಂದಿರಬೇಡ, ಎಷ್ಟು ಕಷ್ಟದಲ್ಲಿರಬೇಡ ಎಂದು ನನಗೆ ಅನ್ನಿಸುತ್ತಿದೆ. ದರ್ಶನ್ ಅಪಾದಿತ ಅಷ್ಟೇ, ಅಪರಾಧಿ ಅಲ್ಲ. ಅವಶ್ಯಕತೆಗಳನ್ನ ಪೂರೈಸುವುದು ಮಾನವೀಯ ಹಕ್ಕು. ಅದನ್ನ ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ತರುಣ್ ಸುಧೀರ್ ತಮ್ಮ "ಚೌಕ" ಚಿತ್ರದ ಶೂಟಿಂಗ್ ವೇಳೆ ಜೈಲಿನೊಳಗೆ ಕಾಲ ಕಳೆದ ಅನುಭವ ಹಂಚಿಕೊಂಡು, “ಅಲ್ಲಿ ಹೇಗಿರುತ್ತೆ ಅಂತ ನನಗೆ ಗೊತ್ತು. ಎಲ್ಲ ಪ್ರಿಸನರ್ಸ್‌ಗೆ ಹ್ಯೂಮನ್ ರೈಟ್ಸ್ ಪ್ರಕಾರ ಕನಿಷ್ಟ ಸೌಲಭ್ಯ ಸಿಗಲೇಬೇಕು. ಅದನ್ನೂ ಮೀರಿ ಏನಾದರೂ ಆಗ್ತಿದೆ ಅಂದ್ರೆ, ಅದು ನೋವು ತಂದಿದೆ” ಎಂದು ಹೇಳಿದರು. ಹಿಂದಿನ ಬಾರಿ ಜೈಲಿನೊಳಗೆ ದರ್ಶನ್‌ಗೆ ವಿಶೇಷ ಸೌಲಭ್ಯ ಸಿಕ್ಕಿತ್ತು ಎಂಬ ಟೀಕೆಗಳೇ ಹಿನ್ನೆಲೆಯಲ್ಲಿ, ಈ ಸಲ ಅಧಿಕಾರಿಗಳು ಅವರ ಮೇಲೆ ಭಾರಿ ನಿಗಾ ಇಟ್ಟಿದ್ದಾರೆ. ಯಾವುದೇ ವಿಶೇಷ ಸೌಲಭ್ಯ ನೀಡದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

"ವಿಷ ಕೊಡಿ" ಎಂದ ದರ್ಶನ್‌, ಸೆಷನ್ಸ್ ಕೋರ್ಟ್‌ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ದರ್ಶನ್‌, “ನನ್ನ ಬಟ್ಟೆಗಳು ಕೊಳಕಾಗಿದೆ, ಫಂಗಸ್ ಹಿಡಿದಿದೆ. ಹೀಗಾಗಿ ವಿಷ ಕೊಡಲು ಆದೇಶಿಸಿ” ಎಂದು ಅಳಲು ತೋಡಿಕೊಂಡರು. ಈ ಮಾತು ಕೇಳಿ ದರ್ಶನ್‌ ಅಭಿಮಾನಿಗಳಂತೆಯೇ ಆಪ್ತರು ಸಹ ಮರುಗಿದ್ದಾರೆ.

ದರ್ಶನ್‌ ಪ್ರಕರಣ ಈಗ ನ್ಯಾಯಾಲಯದ ಹಂತದಲ್ಲಿ ಸಾಗುತ್ತಿದೆ. ಆದರೆ ಅವರ ಆರೋಗ್ಯ, ಮನಸ್ಥಿತಿ, ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅವರ ಸ್ಥಿತಿ ದುಃಖಕರವಾಗಿದೆ. ತರುಣ್ ಸುಧೀರ್‌ ಸೇರಿದಂತೆ ಆಪ್ತ ಬಳಗದವರು ಅವರಿಗಾಗಿ ಬೇಸರ ವ್ಯಕ್ತಪಡಿಸುತ್ತಿದ್ದು, ಅಭಿಮಾನಿಗಳು ಸಹ ದರ್ಶನ್‌ಗೆ ಬೆಂಬಲವಾಗಿ ನಿಂತಿದ್ದಾರೆ. ದರ್ಶನ್‌ ಮುಂದಿನ ದಿನಗಳಲ್ಲಿ ಏನು ತೀರ್ಮಾನ ಎದುರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.