Back to Top

"ಇದ್ರೆ ನೆಮ್ದಿಯಾಗ್ ಇರ್ಬೇಕ್" – ಮಚ್ಚು ಹಿಡಿದು ಫೋಸ್ ಕೊಟ್ಟ ದರ್ಶನ್ ಶಿಷ್ಯ ಠಾಣೆ ಮುಂದೆ ಕ್ಷಮೆ ಕೇಳಿದ ದೃಶ್ಯ ವೈರಲ್

SSTV Profile Logo SStv September 1, 2025
ಮಚ್ಚು ಹಿಡಿದು ರೀಲ್ಸ್ ಮಾಡಿದ ದರ್ಶನ್ ಅಭಿಮಾನಿ ಪವನ್ ಅರೆಸ್ಟ್
ಮಚ್ಚು ಹಿಡಿದು ರೀಲ್ಸ್ ಮಾಡಿದ ದರ್ಶನ್ ಅಭಿಮಾನಿ ಪವನ್ ಅರೆಸ್ಟ್

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿರುವುದು ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ತಮ್ಮ ನೆಚ್ಚಿನ ನಟ ಮತ್ತೆ ಜೈಲು ಸೇರಿದ್ದಾರೆಂಬ ಸುದ್ದಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದರೂ, ಅದೇ ಸಮಯದಲ್ಲಿ ‘ಡೆವಿಲ್’ ಚಿತ್ರತಂಡ ಅಭಿಮಾನಿಗಳಿಗೆ ಸ್ವಲ್ಪ ಸಂತಸ ತರಲು "ಇದ್ರೆ ನೆಮ್ದಿಯಾಗ್ ಇರ್ಬೇಕ್" ಹಾಡನ್ನು ಬಿಡುಗಡೆ ಮಾಡಿತ್ತು. ಈ ಹಾಡು ಕ್ಷಣಾರ್ಧದಲ್ಲಿ ವೈರಲ್ ಆಗಿ, ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಸಾಂಗ್ ಆಗಿತ್ತು.

ಆದರೆ ಈ ಹಾಡಿನ ಟ್ರೆಂಡ್ ನಡುವೆ, ಮಂಡ್ಯದ ಕಾರಸವಾಡಿ ಗ್ರಾಮದ ಪವನ್ ಎಂಬ ಯುವಕ ದೊಡ್ಡ ವಿವಾದಕ್ಕೆ ಗುರಿಯಾಗಿದ್ದಾನೆ. ಪವನ್ "ಇದ್ರೆ ನೆಮ್ದಿಯಾಗ್ ಇರ್ಬೇಕ್" ಹಾಡಿಗೆ ಮಚ್ಚು ಹಿಡಿದು ರೀಲ್ಸ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಹರಿದಾಡಿ ಪೊಲೀಸರ ಗಮನಕ್ಕೆ ಬಿದ್ದಿತು.

ಪವನ್ ವಿರುದ್ಧ ತಕ್ಷಣವೇ ಮಂಡ್ಯ ಪೊಲೀಸರು ಕ್ರಮ ಕೈಗೊಂಡು ಬಂಧಿಸಿದರು. ಪೊಲೀಸರ ಕಚೇರಿಗೆ ಕರೆದುಕೊಂಡು ಹೋಗಿ, ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಅಲ್ಲದೆ ಠಾಣೆ ಎದುರೇ ನಿಲ್ಲಿಸಿ ಕ್ಷಮೆ ಕೇಳಿಸಿದ ದೃಶ್ಯಗಳು ಸಹ ನೆಟ್ಟಿಗರ ನಡುವೆ ಟ್ರೋಲ್ ವಿಷಯವಾಯಿತು. ಪೊಲೀಸರು ಇಂತಹ ಮಾರಕಾಸ್ತ್ರ ಹಿಡಿದು ಫೋಸ್ ಕೊಡುವ ‘ಪುಡಿರೌಡಿಗಳಿಗೆ’ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ “ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವುದಕ್ಕೆ ಕಾನೂನು ಉಲ್ಲಂಘನೆ ಮಾಡಿದರೆ ಜೈಲಿನ ಕಂಬಿಗಳ ಹಿಂದೆ ನಿಲ್ಲಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

ದರ್ಶನ್ ಅಭಿಮಾನಿಗಳೇ ತಮ್ಮ ಪ್ರೀತಿಯ ನಟನ ಇಮೇಜ್ ಹಾಳು ಮಾಡುವ ರೀತಿಯಲ್ಲಿ ವರ್ತಿಸಬಾರದು ಎಂದು ಅಭಿಮಾನಿಗಳೇ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ. "ನಟನ ಮೇಲೆ ಅಭಿಮಾನ ಇರಲಿ, ಆದರೆ ಅದು ಅರಾಜಕತೆಯಾಗಬಾರದು" ಎಂಬ ಸಂದೇಶ ಹರಿದಾಡುತ್ತಿದೆ. ಹೀಗೆ, ದರ್ಶನ್ ಜೈಲು ಸೇರುವ ದುಃಖದಲ್ಲಿ, ಅಭಿಮಾನಿಗಳು ಹಾಡುಗಳ ಮೂಲಕ ನೆಮ್ಮದಿ ಹುಡುಕುತ್ತಿದ್ದರೆ, ಮತ್ತೊಂದೆಡೆ ಕೆಲ ಅಭಿಮಾನಿಗಳ ನಡವಳಿಕೆ ಪೊಲೀಸರು ಗಂಭೀರವಾಗಿ ನೋಡಲು ಕಾರಣವಾಗಿದೆ.