“ಕರ್ನಾಟಕವನ್ನು ಪಾ*ಸ್ತಾನ ಮಾಡ್ತೀರಾ?” – ಗೃಹ ಸಚಿವರ ಹೇಳಿಕೆಗೆ ಕಾವ್ಯಾ ಶಾಸ್ತ್ರಿ ಭರ್ಜರಿ ಕೌಂಟರ್!


ಮಂಡ್ಯದ ಮದ್ದೂರುನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಘಟನೆ ರಾಜ್ಯದೆಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಎರಡು ಸಮುದಾಯಗಳ ಮಧ್ಯೆ ನಡೆದ ಈ ಘರ್ಷಣೆಯಲ್ಲಿ ಹಲವರಿಗೆ ಪೆಟ್ಟಾಗಿದ್ದು, ಘಟನೆ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ.
ಸೆಪ್ಟೆಂಬರ್ 7ರಂದು ರಾತ್ರಿ 7.30ರ ಸುಮಾರಿಗೆ ಮದ್ದೂರಿನ ಚನ್ನೇಗೌಡ ಬಡಾವಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ಮೆರವಣಿಗೆಯ ಮೂಲಕ ವಿಸರ್ಜನೆಗೆ ತೆರಳುತ್ತಿದ್ದರು. ಮಸೀದಿ ಬಳಿಗೆ ಮೆರವಣಿಗೆ ತಲುಪಿದಾಗ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದ್ದು, ಪ್ರತಿಯಾಗಿ ಮೆರವಣಿಗೆಯಲ್ಲಿದ್ದವರೂ ಕಲ್ಲು ತೂರಿದ್ದಾರೆ ಎಂಬುದು ಸ್ಥಳೀಯರ ಆರೋಪ.
ಈ ವೇಳೆ ನಾಲ್ವರು ಹೋಮ್ ಗಾರ್ಡ್ ಸೇರಿದಂತೆ ಎಂಟು ಜನರು ಗಾಯಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ 21 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ.ಆರ್. ಪರಮೇಶ್ವರ್, “ಘಟನೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದೇವೆ. ಯಾರ್ಯಾರು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಹಿಂದೂ ಪರ ಸಂಘಟನೆಗಳವರೂ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ತನಿಖೆ ಬಳಿಕ ಸತ್ಯಾಂಶ ಹೊರ ಬೀಳಲಿದೆ” ಎಂದು ತಿಳಿಸಿದ್ದಾರೆ.
ಗೃಹ ಸಚಿವರ ಈ ಹೇಳಿಕೆ ಕುರಿತು ನಟಿ ಕಾವ್ಯಾ ಶಾಸ್ತ್ರಿ ಇನ್‌ಸ್ಟಾಗ್ರಾಮ್ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಬರೆದಿರುವುದೇನೆಂದರೆ: “ಮದ್ದೂರಿನ ಗಣೇಶ ವಿಸರ್ಜನೆ ವೇಳೆಯ ದಾಂಧಲೆಗೆ ಹಿಂದೂ ಸಂಘಟನೆಗಳು ಕಾರಣ ಎನ್ನುವ ಶಂಕೆ ಅಂದಿರುವ ಗೃಹ ಮಂತ್ರಿಗಳಿಗೆ ನಾಚಿಕೆ ಆಗಬೇಕು. ಆ ಸ್ಥಾನದಲ್ಲಿದ್ದು ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕರ್ನಾಟಕವನ್ನು ಪಾ*ಸ್ತಾನ ಮಾಡೋಕೆ ಹೊರಟಿದ್ದೀರಾ?” ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಕಾವ್ಯಾ ಈ ಪೋಸ್ಟ್ ಮಾಡಿದ ಬಳಿಕ ಹಲವರು ಅವರನ್ನು ಅನ್‌ಫಾಲೋ ಮಾಡಲು ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ನನ್ನ ಧರ್ಮಕ್ಕಾಗಿ ನಿಲ್ಲುವುದರಿಂದ ನನ್ನನ್ನು ಅನ್‌ಫಾಲೋ ಮಾಡುತ್ತಿರುವವರ ಬಗ್ಗೆ ನನಗೆ ಕಾಳಜಿ ಇಲ್ಲ. ಒಬ್ಬನೇ ಒಬ್ಬ ಫಾಲೋವರ್ ಉಳಿದರೂ, ನನ್ನ ಧರ್ಮದ ಪರವಾಗಿ ಮಾತನಾಡುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ. “ಜಾತ್ಯತೀತತೆ ಎಂದರೆ ಎಲ್ಲಾ ಧರ್ಮಗಳನ್ನು ಗೌರವಿಸುವುದು. ಆದರೆ ಅದಕ್ಕೆ ನಮ್ಮ ಸ್ವಂತ ಧರ್ಮವನ್ನು ತ್ಯಜಿಸುವ ಅಗತ್ಯವಿಲ್ಲ” ಎಂದು ಬರೆದಿದ್ದಾರೆ.
ಕಾವ್ಯಾ ಅವರ ಈ ನಿಲುವಿಗೆ ಹಲವರು ಬೆಂಬಲ ಸೂಚಿಸಿದ್ದಾರೆ. “ನಿಮ್ಮ ಧೈರ್ಯಕ್ಕೆ ಸಲಾಂ ಮೇಡಂ” ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಕಿರುತೆರೆಯ ನಿರೂಪಕಿಯಾಗಿ ಪರಿಚಿತರಾದ ಕಾವ್ಯಾ ಶಾಸ್ತ್ರಿ, ಬಳಿಕ ಸಿನಿಮಾಗಳಲ್ಲೂ ಮತ್ತು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದು, ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ವೀಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಮದ್ದೂರಿನ ಘಟನೆ ಇನ್ನಷ್ಟು ತನಿಖೆಗೆ ಒಳಪಟ್ಟಿದ್ದು, ಸತ್ಯಾಂಶ ಹೊರಬಂದ ಮೇಲೆ ಮಾತ್ರ ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ. ಆದರೆ ಈ ಪ್ರಕರಣವು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
