ಗಾಂಜಾ ಸಾಗಾಟದ ದೃಶ್ಯಗಳಿಂದ ವಿವಾದಕ್ಕೆ ಸಿಲುಕಿದ ಅನುಷ್ಕಾ ಶೆಟ್ಟಿಯ ಹೊಸ ಸಿನಿಮಾ!


ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ, ಎರಡು ವರ್ಷಗಳ ಬಳಿಕ ತೆರೆಗೆ ಬಂದಿರುವ ತಮ್ಮ ಹೊಸ ಸಿನಿಮಾ ‘ಘಾಟಿ’ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಆದರೆ ಸಿನಿಮಾ ಬಿಡುಗಡೆಯ ಮುನ್ನವೇ ಈ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ‘ಬಾಹುಬಲಿ 2’ ನಂತರ ಅನುಷ್ಕಾ ಶೆಟ್ಟಿ ತಮ್ಮ ಸಿನಿಮಾಗಳ ಸಂಖ್ಯೆ ಕಡಿಮೆ ಮಾಡಿದರು. ವರ್ಷಕ್ಕೆ ಐದು–ಆರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಈಗ ಕೆಲವೇ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ. ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಮೂಲಕ ಕಮ್‌ಬ್ಯಾಕ್ ನೀಡಿದ ಬಳಿಕ ಅನುಷ್ಕಾ ಈಗ ಮಹಿಳಾ ಪ್ರಧಾನ ಕಥೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
ಕ್ರಿಶ್ ಜಗರ್ಲಮುಡಿ ನಿರ್ದೇಶನದ ‘ಘಾಟಿ’ ಸಿನಿಮಾ, ಗಾಂಜಾ ಉತ್ಪಾದನೆ ಮತ್ತು ಸಾಗಾಟದ ಕಥಾಹಂದರ ಹೊಂದಿದೆ. ಸಮುದಾಯವೊಂದರ ಹೋರಾಟವನ್ನು ಆಧಾರ ಮಾಡಿಕೊಂಡು ಈ ಸಿನಿಮಾ ನಿರ್ಮಾಣವಾಗಿದ್ದು, ಅನುಷ್ಕಾ ಶೆಟ್ಟಿ ಸಮುದಾಯದ ಯುವತಿಯ ಪಾತ್ರದಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ. ಟ್ರೈಲರ್‌ನಲ್ಲಿ ಅನುಷ್ಕಾ ಗಾಂಜಾ ಸಾಗಾಟದಲ್ಲಿ ತೊಡಗಿರುವ ದೃಶ್ಯಗಳು ಹೆಚ್ಚು ಇರುವುದರಿಂದ, ಇದು ಪೊಲೀಸ್ ಇಲಾಖೆಯ ಆಕ್ರೋಶಕ್ಕೆ ಕಾರಣವಾಗಿದೆ.
ತೆಲಂಗಾಣ ಪೊಲೀಸರ ಮಾದಕ ವಸ್ತು ನಿಗ್ರಹ ವಿಭಾಗ ‘ಈಗಲ್’, ಸಿನಿಮಾ ಕುರಿತು ಅಧಿಕೃತ ಹೇಳಿಕೆ ನೀಡಿದೆ. ಅವರ ಪ್ರಕಾರ, ಟ್ರೈಲರ್‌ನಲ್ಲಿರುವ ಕೆಲವು ದೃಶ್ಯಗಳು ಗಾಂಜಾ ಸೇವನೆ ಮತ್ತು ಸಾಗಾಟಕ್ಕೆ ಪ್ರಚಾರ ನೀಡುತ್ತಿರುವಂತೆ ಕಂಡಿವೆ. ಹೀಗಾಗಿ ಸಿನಿಮಾ ಬಿಡುಗಡೆಯ ನಂತರ ಅದರ ವಿಷಯದ ಮೇಲೆ ಹದ್ದಿನ ಕಣ್ಣು ಇಡಲಾಗುವುದು ಎಂದು ತಿಳಿಸಿದ್ದಾರೆ.
ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ಇತ್ತೀಚೆಗೆ ಮಾದಕ ವಸ್ತು ಬಳಕೆಯ ಪ್ರಕರಣಗಳು ಹೆಚ್ಚಾಗಿವೆ. ಸ್ವತಃ ಸಿಎಂ ರೇವಂತ್ ರೆಡ್ಡಿಯವರೂ ಸಿನಿತಾರೆಯರು ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದರು. ಇಂತಹ ಸಂದರ್ಭದಲ್ಲೇ ‘ಘಾಟಿ’ ಸಿನಿಮಾದ ವಿಷಯ ಹೆಚ್ಚು ವಿವಾದಾತ್ಮಕವಾಗಿದೆ. ಚಿತ್ರದಲ್ಲಿ ಅನುಷ್ಕಾ ಜೊತೆಗೆ ವಿಕ್ರಂ ಪ್ರಭು, ಚೈತನ್ಯ ರಾವ್ ಮಡ್ಡಿ, ಜಗಪತಿ ಬಾಬು ಸೇರಿದಂತೆ ಪ್ರಮುಖ ನಟರು ಅಭಿನಯಿಸಿದ್ದಾರೆ. ‘ವೇದಂ’, ‘ಗೌತಮಿ ಪುತ್ರ ಶಾತಕರ್ಣಿ’, ‘ಎನ್‌ಟಿಆರ್’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡಿರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಅನುಷ್ಕಾ ಶೆಟ್ಟಿಯ ‘ಘಾಟಿ’, ಸಾಹಸಮಯ ಕಥಾಹಂದರ, ಸಮಾಜದ ಹಿನ್ನಲೆ ಹಾಗೂ ಪೊಲೀಸ್ ಇಲಾಖೆಯ ಎಚ್ಚರಿಕೆ ಎಲ್ಲಾ ಸೇರಿ ದೊಡ್ಡ ಕುತೂಹಲ ಹುಟ್ಟಿಸಿದೆ. ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತದೆಯೋ, ಅಥವಾ ವಿವಾದದ ಬಿರುಗಾಳಿಗೆ ಸಿಲುಕುತ್ತದೆಯೋ ಎಂಬುದನ್ನು ಕಾದು ನೋಡಬೇಕು.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
