ಬಿಗ್ ಬಾಸ್ ರಂಜಿತ್ ವಿರುದ್ಧ ಜೀವ ಬೆದರಿಕೆ ಆರೋಪ – ಅಮೃತಹಳ್ಳಿ ಪೊಲೀಸರಿಗೆ ದೂರು


ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಜನಪ್ರಿಯರಾದ ರಂಜಿತ್ ಅವರ ವಿರುದ್ಧ ಹೊಸ ವಿವಾದ ಸೃಷ್ಟಿಯಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ದೂರು ದಾಖಲಾಗಿದೆ. ಈ ಪ್ರಕರಣವು ಅಕ್ಕ-ತಮ್ಮನ ನಡುವಿನ ಆಸ್ತಿ ಗಲಾಟೆಯಿಂದ ಹುಟ್ಟಿಕೊಂಡಿದ್ದು, ಇದೀಗ ಕಾನೂನು ಹಾದಿ ಹಿಡಿದಿದೆ.
ಜಗದೀಶ್ ಎಂಬವರು ರಂಜಿತ್ ವಿರುದ್ಧ ದೂರು ದಾಖಲಿಸಿದ್ದಾರೆ. 2018ರಿಂದ ಅವರು ತಮ್ಮ ಕುಟುಂಬದೊಂದಿಗೆ ಅಮೃತಹಳ್ಳಿಯಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಾರೆ. ಆದರೆ, 2025ರಿಂದ ಇದೇ ಫ್ಲ್ಯಾಟ್‌ನಲ್ಲಿ ರಂಜಿತ್ ತಮ್ಮ ಅಕ್ಕ-ಬಾವನೊಂದಿಗೆ ವಾಸವಿದ್ದು, "ಈ ಮನೆ ನನ್ನದು" ಎಂಬ ಹಕ್ಕು ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಗದೀಶ್ ಅವರ ಪ್ರಕಾರ, ಮನೆ ಹಕ್ಕು ವಿಚಾರದಲ್ಲಿ ಉಂಟಾದ ವಾಗ್ವಾದದ ಸಮಯದಲ್ಲಿ ರಂಜಿತ್ ತಮ್ಮ ಅಕ್ಕ ಹಾಗೂ ಪತ್ನಿಯೊಂದಿಗೆ ಸೇರಿ ಗಲಾಟೆ ನಡೆಸಿ, ತಮ್ಮನ್ನು ಜೀವ ಬೆದರಿಕೆ ಹಾಕಿದರು. ಇದಕ್ಕಾಗಿ ಸಾಕ್ಷ್ಯವಾಗಿ ಮನೆಯಲ್ಲಿ ನಡೆದ ಬೈದಾಟ ಮತ್ತು ಜಗಳದ ವೀಡಿಯೋವನ್ನು ಪೊಲೀಸರಿಗೆ ಸಲ್ಲಿಸಲಾಗಿದೆ.
ದೂರು ಸ್ವೀಕರಿಸಿದ ಅಮೃತಹಳ್ಳಿ ಪೊಲೀಸರು ಎನ್‌ಸಿಆರ್ (NCR) ದಾಖಲಿಸಿದ್ದಾರೆ. ನಂತರ ರಂಜಿತ್ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗಲಾಟೆ ನಡೆಯದಂತೆ ಎಚ್ಚರಿಕೆ ನೀಡಿದ್ದು, ವಿವಾದವನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಲು ಸೂಚನೆ ನೀಡಿದ್ದಾರೆ.
ರಂಜಿತ್ ಬಿಗ್ ಬಾಸ್ ಮೂಲಕ ಮನೆಮಾತಾದರೂ, ಶೋ ನಂತರದಿಂದ ಹಲವು ವಿವಾದಗಳಲ್ಲಿ ಸಿಲುಕಿದ್ದಾರೆ. ಈಗಿನ ಆಸ್ತಿ ಗಲಾಟೆಯ ಪ್ರಕರಣವು ಅವರ ಇಮೇಜ್‌ಗೆ ಮತ್ತಷ್ಟು ಹೊರೆ ತಂದಿದೆ. ರಂಜಿತ್ ವಿರುದ್ಧದ ಈ ದೂರು ಇದೀಗ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಇದರ ಅಂತಿಮ ತೀರ್ಮಾನವೇನು ಎನ್ನುವುದು ಕಾದು ನೋಡಬೇಕಾಗಿದೆ.