Back to Top

ರೆಬೆಲ್ ಸ್ಟಾರ್ ಅಂಬರೀಶ್‌ಗೂ ‘ಕರ್ನಾಟಕ ರತ್ನ’ ನೀಡುವಂತೆ ಅಭಿಮಾನಿಗಳ ಮನವಿ

SSTV Profile Logo SStv September 15, 2025
ರೆಬಲ್ ಸ್ಟಾರ್​ ಅಂಬಿಗೂ ಕರ್ನಾಟಕ ರತ್ನ ನೀಡುವಂತೆ ಆಗ್ರಹ
ರೆಬಲ್ ಸ್ಟಾರ್​ ಅಂಬಿಗೂ ಕರ್ನಾಟಕ ರತ್ನ ನೀಡುವಂತೆ ಆಗ್ರಹ

ಕನ್ನಡ ಚಿತ್ರರಂಗ ಮತ್ತು ರಾಜಕೀಯದಲ್ಲಿ ಅಜಾತಶತ್ರುವಾಗಿ ಹೆಸರು ಮಾಡಿದ್ದ, ಜನಪ್ರಿಯ ನಟ ಹಾಗೂ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಅಭಿಮಾನಿಗಳು ಹಾಗೂ ಹಿರಿಯ ನಟಿ ತಾರಾ ಅನುರಾಧ ಮನವಿ ಮಾಡಿದ್ದಾರೆ.

ಡೆಪ್ಯುಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ನಟಿ ತಾರಾ ಅನುರಾಧ, ಅಭಿಮಾನಿಗಳ ಪರವಾಗಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. "ಸಮಾಜಸೇವೆ, ಚಿತ್ರರಂಗ ಹಾಗೂ ರಾಜಕೀಯದಲ್ಲಿ ಅಂಬರೀಶ್ ಅವರ ಕೊಡುಗೆ ಅಪಾರ. ಅವರಿಗೆ ತಕ್ಕ ಗೌರವ ದೊರಕಬೇಕು," ಎಂದು ಮನವಿ ಮಾಡಲಾಗಿದೆ.

ಅಂಬರೀಶ್, ತಮ್ಮ ವಿಶಿಷ್ಟ ಶೈಲಿ, ಸರಳ ನಡವಳಿಕೆ ಮತ್ತು ಜನಪರ ರಾಜಕೀಯದಿಂದ “ಕಲಿಯುಗದ ಕರ್ಣ” ಎಂಬ ಬಿರುದನ್ನು ಪಡೆದಿದ್ದರು. ಚಿತ್ರರಂಗದಲ್ಲಿ ಹಿರಿಯಣ್ಣನಂತೆ ಹಲವಾರು ಕಲಾವಿದರಿಗೂ ಬೆಂಬಲವಾಗಿದ್ದ ಅವರು, ರಾಜಕೀಯದಲ್ಲಿಯೂ ಪಕ್ಷಗಳ ಬೇದಭಾವವಿಲ್ಲದೆ ಎಲ್ಲರಿಗೂ ಅಚ್ಚುಮೆಚ್ಚಾದ ವ್ಯಕ್ತಿಯಾಗಿದ್ದರು.

ಅಭಿನಯದ ಜೊತೆಗೆ, ಸಾಮಾಜಿಕ ಸೇವೆಯಲ್ಲೂ ಅಂಬರೀಶ್ ತಮ್ಮದೇ ಆದ ಗುರುತು ಮೂಡಿಸಿದ್ದರು. ಸಾಮಾನ್ಯ ಜನರಿಂದ ಹಿಡಿದು ಸಹೋದ್ಯೋಗಿಗಳವರೆಗೆ, ಎಲ್ಲರ ಸಮಸ್ಯೆಗಳಲ್ಲಿ ತೊಡಗಿಸಿಕೊಂಡು ನೆರವಾದ ಕಾರಣ, ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಸರ್ಕಾರ, ಕನ್ನಡದ ನಟ ಡಾ. ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಅಂಬರೀಶ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕೆಂದು ಒತ್ತಾಯ ಹೆಚ್ಚಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು "ಅಂಬರೀಶ್ ಅವರ ಸೇವೆ ಮತ್ತು ಕೊಡುಗೆಯನ್ನು ಮರೆಯಲಾಗದು. ಅವರಿಗೆ `ಕರ್ನಾಟಕ ರತ್ನ’ ನೀಡುವುದು, ನಿಜವಾದ ಗೌರವ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತದೆ ಎನ್ನುವುದನ್ನು ಅಭಿಮಾನಿಗಳು ಆತುರದಿಂದ ಕಾದು ನೋಡುತ್ತಿದ್ದಾರೆ. ಅಂಬರೀಶ್ ಅವರ ಹೆಸರು `ಕರ್ನಾಟಕ ರತ್ನ’ ಪುರಸ್ಕೃತರ ಪಟ್ಟಿಗೆ ಸೇರಿದ್ದರೆ, ಅದು ಕನ್ನಡ ಚಿತ್ರರಂಗಕ್ಕೂ, ಅಭಿಮಾನಿಗಳಿಗೊ ಅಪಾರ ಸಂತಸ ತರುತ್ತದೆ ಎಂಬುದು ಖಚಿತ.