ಸ್ವಂತ ಚಿನ್ನದ ಅಂಗಡಿ ಮಾಲೀಕನಿಂದ ಕೆಜಿಎಫ್ ಚಾಚಾವರೆಗೆ: ನಟ ಹರೀಶ್ ರಾಯ್ ಅವರ ಹೋರಾಟ ಮತ್ತು ಜೀವನ ಹಾದಿ!


ಸಿನಿಮಾ ಲೋಕದಲ್ಲಿ ಕೆಲವರು ತಮ್ಮ ಪಾತ್ರಗಳ ಮೂಲಕ ಜನಮನದಲ್ಲಿ ಅಚ್ಚಳಿಯದ ಗುರುತು ಮೂಡಿಸುತ್ತಾರೆ. ʻಓಂʼ ಚಿತ್ರದ ಡಾನ್ ಹಾಗೂ ʻಕೆಜಿಎಫ್ʼ ಸರಣಿಯ ಚಾಚಾ ಪಾತ್ರದಿಂದ ಖ್ಯಾತಿಗೆ ಬಂದ ನಟ ಹರೀಶ್ ರಾಯ್, ಇಂದು ಆರೋಗ್ಯದ ಕಠಿಣ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಥೈರಾಯ್ಡ್ ಕ್ಯಾನ್ಸರ್ ನಾಲ್ಕನೇ ಹಂತ ಪತ್ತೆಯಾಗಿದ್ದು, ರೋಗವು ಹೊಟ್ಟೆಗೂ ವ್ಯಾಪಿಸಿದೆ. ಚಿಕಿತ್ಸೆಗೆ ಕೋಟಿ ಕೋಟಿ ಹಣ ಬೇಕಾದ ಪರಿಸ್ಥಿತಿ. ಆದರೆ, ಅವರ ಬದುಕಿನ ಹಾದಿ ನೋಡಿದರೆ, ಹೋರಾಟ ಎಂಬುದು ಅವರಿಗೆ ಹೊಸದಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಚಿತ್ರರಂಗ ಪ್ರವೇಶಕ್ಕೂ ಮುನ್ನ ಹರೀಶ್ ರಾಯ್ ತಮ್ಮ ಊರಿನಲ್ಲಿ ಸ್ವಂತ ಚಿನ್ನದ ಅಂಗಡಿ ಹೊಂದಿದ್ದರು. ಆದರೆ ಬೆಳ್ಳಿ ಪರದೆಯ ಕನಸು ಅವರನ್ನು ಬಿಡಲಿಲ್ಲ. ಅಣ್ಣನಿಗೆ ಅಂಗಡಿ ಬಿಟ್ಟು, ಬೆಂಗಳೂರಿಗೆ ಬಂದು ಸಿನಿಮಾ ಲೋಕದಲ್ಲಿ ತಮಗೆ ತಾವು ಅವಕಾಶ ಹುಡುಕಿಕೊಂಡರು. “ಚಿತ್ರರಂಗ ಬಿಟ್ಟು ಬದುಕುವುದಕ್ಕೆ ನನಗೆ ಆಗಲ್ಲ. ಎಷ್ಟೇ ಕಷ್ಟ ಆದರೂ ನಾನು ಇದರಿಂದ ಹೊರಗೆ ಬರಲ್ಲ” ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಹೆಂಡತಿ-ಮಕ್ಕಳ ಬೆಂಬಲ, ಇಂದು ಬದುಕಿನ ಕಠಿಣ ಹಂತದಲ್ಲಿರುವ ಹರೀಶ್ ರಾಯ್ ಅವರ ಬೆಂಬಲವೇ ಅವರ ಕುಟುಂಬ. ಅವರ ಮಗ ಓದುತ್ತಿದ್ದು, ತಂದೆಗೆ ಬರ್ಡನ್ ಮಾಡದೇ ತಾನೇ ದುಡಿದು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಅವರ ಮಡದಿ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದು, “ದುಡ್ಡಿಗಾಗಿ ಯಾರ ಹತ್ತಿರ ಕೈ ಚಾಚುವುದಿಲ್ಲ” ಎಂದು ದೃಢವಾಗಿ ನಿಂತಿದ್ದಾರೆ. “ನಾನು ಆರ್ಟಿಸ್ಟ್ ಆಗುವುದಕ್ಕೆ ದೊಡ್ಡ ಕಾರಣ ನನ್ನ ಹೆಂಡತಿ. ಅವಳ ಆಸೆಯನ್ನ ಸಮಾಧಿ ಮಾಡಿ ನನ್ನ ಕನಸಿಗೆ ಸಪೋರ್ಟ್ ಕೊಟ್ಟಿದ್ದಾಳೆ” ಎಂದು ಹರೀಶ್ ರಾಯ್ ಭಾವುಕರಾಗಿ ಹೇಳಿದ್ದಾರೆ.
ʻಓಂʼ ಚಿತ್ರದಿಂದ ಪರಿಚಿತನಾದರೂ, ʻಕೆಜಿಎಫ್ʼ ಮೂಲಕ ರಾಷ್ಟ್ರವ್ಯಾಪಿ ಗುರುತನ್ನು ಪಡೆದರು. ಈಗ ಅವರ ಸಂಕಷ್ಟವನ್ನು ಅರಿತು ಚಿತ್ರರಂಗದ ಸಹೋದ್ಯೋಗಿಗಳು ನೆರವಿಗೆ ಮುಂದಾಗಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾ 11 ಲಕ್ಷ ರೂ. ನೆರವು ನೀಡಿದ್ದಾರೆ. ಚಿಕಿತ್ಸೆ ವೆಚ್ಚ, ಪ್ರತಿ ಇಂಜೆಕ್ಷನ್‌ಗೆ ಸುಮಾರು ₹3.55 ಲಕ್ಷ ವೆಚ್ಚ. ಒಟ್ಟಾರೆ ₹70 ಲಕ್ಷಕ್ಕೂ ಹೆಚ್ಚು ಹಣ ಅಗತ್ಯ. ಈ ಭಾರೀ ಹೊಣೆಗಾರಿಕೆ ನಡುವೆ, ಕುಟುಂಬದ ಧೈರ್ಯ ಮತ್ತು ಅಭಿಮಾನಿಗಳ ಪ್ರಾರ್ಥನೆ ಅವರಿಗೊಂದು ದೊಡ್ಡ ಬೆಂಬಲವಾಗಿದೆ.
ಹರೀಶ್ ರಾಯ್ ಅವರ ಬದುಕು ಒಂದು ಹೋರಾಟದ ಕಥೆ. ಚಿನ್ನದ ಅಂಗಡಿಯ ಮಾಲೀಕರಿಂದ ಕಲಾವಿದ, ಪ್ರಖ್ಯಾತ ನಟನಿಂದ ಕಾಯಿಲೆಯ ಎದುರಾಟ ಪ್ರತಿಯೊಂದು ಹಂತದಲ್ಲೂ ಅವರು ಹೋರಾಟದ ಮೂಲಕ ಬದುಕಿದ್ದಾರೆ. ಇಂದು ಅವರಿಗಾಗಿಯೇ ಅಭಿಮಾನಿಗಳು, ಸ್ನೇಹಿತರು ಹಾಗೂ ಚಿತ್ರರಂಗದವರು ನೆರವಿನ ಹಸ್ತ ಚಾಚುತ್ತಿದ್ದಾರೆ. ಎಲ್ಲರ ಪ್ರಾರ್ಥನೆ ಒಂದೇ ಹರೀಶ್ ರಾಯ್ ಬೇಗ ಗುಣಮುಖರಾಗಿ ಮತ್ತೆ ಚಿತ್ರರಂಗದಲ್ಲಿ ಚಾಚಾ ಪಾತ್ರದಂತೆ ಖಡಕ್ ಮರು ಎಂಟ್ರಿ ಕೊಡುವಂತಾಗಲಿ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
