ಯಶ್, ಧ್ರುವಾ ನಂತರ ಈಗ ಶಿವಣ್ಣ: ರಾಯ್‌ಗಾಗಿ ಕೈ ಜೋಡಿಸಿದ ಕನ್ನಡ ತಾರೆಗಳು


ಜೀವನದ ಪಯಣ ಗಡಿಯಾರದ ಮುಳ್ಳಿನಂತೆ ಕೆಲವೊಮ್ಮೆ ಮೃದುವಾಗಿ ಸಾಗುತ್ತದೆ, ಮತ್ತೊಮ್ಮೆ ತೀವ್ರ ತಿರುವುಗಳನ್ನು ತಂದು ಬದುಕನ್ನೇ ದುಸ್ತರಗೊಳಿಸುತ್ತದೆ. ಕೆಜಿಎಫ್‌ನ ಚಾಚಾ, ‘ಓಂ’ನ ರಾಯ್ ಎಂದೇ ಜನಪ್ರಿಯರಾದ ನಟ ಹರೀಶ್ ರಾಯ್ ಅವರ ಬದುಕು ಇತ್ತೀಚೆಗೆ ಇದೇ ರೀತಿಯ ಕಠಿಣ ಹಂತವನ್ನು ಎದುರಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಹರೀಶ್ ರಾಯ್ ಕ್ಯಾನ್ಸರ್‌ನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆರೋಗ್ಯ ಹದಗೆಟ್ಟಿದ್ದು, ದೇಹದ ತೂಕ ಕಡಿಮೆಯಾಗಿದ್ದು, ಹೊಟ್ಟೆಯಲ್ಲಿ ನೀರು ತುಂಬಿಕೊಂಡಿರುವ ಪರಿಸ್ಥಿತಿ ಉಂಟಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಹೆಚ್ಚಿನ ವೆಚ್ಚ ಬೇಕಾದ ಕಾರಣ ಅವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಕನ್ನಡ ಚಿತ್ರರಂಗದಿಂದ ಭಾವನಾತ್ಮಕ ಸ್ಪಂದನೆ, ಹರೀಶ್ ರಾಯ್ ಅವರ ಈ ಕಷ್ಟದ ದಿನಗಳಲ್ಲಿ, ಕನ್ನಡ ಚಿತ್ರರಂಗದ ಹಲವರು ನೆರವಿಗೆ ಧಾವಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಈಗಾಗಲೇ ನೆರವು ನೀಡಿದ್ದು, ಮತ್ತೊಮ್ಮೆ ಸಹಾಯಕ್ಕೆ ಮುಂದಾಗಿದ್ದಾರೆ. ಧ್ರುವಾ ಸರ್ಜಾ ಸಹ ದೊಡ್ಡ ಮಟ್ಟದಲ್ಲಿ ನೆರವು ನೀಡಿದ್ದಾರೆ. ರಕ್ಷಕ್ ಬುಲೆಟ್ ಸೇರಿ ಅನೇಕರು ನೆರವಿನ ಹಸ್ತ ಚಾಚಿದ್ದಾರೆ. ಇದರೊಂದಿಗೆ ಕನ್ನಡದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಸಹ ತಮ್ಮ ಕೈಲಾದ ಮಟ್ಟಿಗೆ ನೆರವು ನೀಡಿದ್ದಾರೆ. ‘ಓಂ’ ಚಿತ್ರದ ಸಹನಟ, ಸಹೋದರನಂತೆ ಕಂಡಿದ್ದ ಹರೀಶ್ ರಾಯ್‌ಗಾಗಿ ಶಿವಣ್ಣ ಕೈ ಚಾಚಿದ ನೆರವು ಅಭಿಮಾನಿಗಳ ಮನ ಗೆದ್ದಿದೆ.
ಯೂಟ್ಯೂಬ್ ಚಾನೆಲ್‌ಗೆ ಮಾತನಾಡಿದ ಹರೀಶ್ ರಾಯ್, “ಚಿಕಿತ್ಸೆಗೆ ಅರವತ್ತರಿಂದ ಎಂಬತ್ತು ಲಕ್ಷದವರೆಗೆ ಬೇಕಾಗುತ್ತೆ. ಮತ್ತೆ ಒಂದೂವರೆ ವರ್ಷ ನಿರಂತರವಾಗಿ ಚಿಕಿತ್ಸೆ ಪಡೆಯಬೇಕಿದೆ. ಎಷ್ಟು ಹಣ ಬೇಕು? ಎಲ್ಲಿಂದ ತರೋದು? ಎಂಬ ಪ್ರಶ್ನೆಗಳು ತಲೆಕೆಡಿಸುತ್ತಿದ್ದವು. ಸಹಾಯ ಕೇಳೋದು ಮುಜುಗರ ಅನ್ನಿಸ್ತು. ಆದರೆ ಡಾಕ್ಟರ್ ಮಾತು, ಪತ್ನಿ-ಮಕ್ಕಳ ಭವಿಷ್ಯ ನೆನೆಸಿಕೊಂಡು ಸಹಾಯ ಕೇಳಲು ಮುಂದಾದೆ” ಎಂದು ಭಾವುಕರಾದರು. ಈಗ ಹಲವರು ಸಹಾಯ ಮಾಡಿರುವುದರಿಂದ, ವೈದ್ಯರು “99% ನಿಮಗೆ ಏನೂ ಆಗುವುದಿಲ್ಲ” ಎಂದು ಭರವಸೆ ನೀಡಿದ್ದಾರೆ. ಮುಂದಿನ ವಾರದಿಂದ ಚಿಕಿತ್ಸೆ ಪ್ರಾರಂಭವಾಗಲಿದೆ.
ಕೆಜಿಎಫ್‌ನ ಚಾಚಾ, ಓಂನ ರಾಯ್ ಹರೀಶ್ ರಾಯ್ ಶೀಘ್ರ ಗುಣಮುಖರಾಗಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಲಿ ಎಂಬುದೇ ಅಭಿಮಾನಿಗಳ ಹಾಗೂ ಸಹೋದ್ಯೋಗಿಗಳ ಹಾರೈಕೆ. ಅವರ ಹೋರಾಟಕ್ಕೆ ಇಡೀ ಸ್ಯಾಂಡಲ್‌ವುಡ್ ಕೈಜೋಡಿಸಿರುವುದು, ಕನ್ನಡದ ಏಕತೆ ಮತ್ತು ಮಾನವೀಯತೆಯ ನಿದರ್ಶನ ಎಂದು ಹೇಳಬಹುದು.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
