Back to Top

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ದಿಂಬು-ಹಾಸಿಗೆ ಬೇಡಿಕೆ, ಪವಿತ್ರಾ ಗೌಡ ಮತ್ತೆ ಜಾಮೀನು ಅರ್ಜಿ ಸಲ್ಲಿಕೆ

SSTV Profile Logo SStv August 30, 2025
ದರ್ಶನ್–ಪವಿತ್ರಾ ಅರ್ಜಿಗಳ ತೀರ್ಪು ನಿರ್ಣಾಯಕ ಹಂತಕ್ಕೆ!
ದರ್ಶನ್–ಪವಿತ್ರಾ ಅರ್ಜಿಗಳ ತೀರ್ಪು ನಿರ್ಣಾಯಕ ಹಂತಕ್ಕೆ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ನಟ ದರ್ಶನ್ ಮತ್ತು ಅವರ ಆಪ್ತ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನು ರದ್ದು ಆಗಿ, ಸದ್ಯ ಎಲ್ಲರೂ ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ನಡುವೆಯೇ ಇಬ್ಬರ ಕಡೆಯಿಂದ ವಿಭಿನ್ನ ಬೇಡಿಕೆಗಳು ಮತ್ತು ಅರ್ಜಿಗಳು ಕೋರ್ಟ್ ಮುಂದೆ ಕೇಳಿಬಂದಿವೆ.

ಜೈಲಿನಲ್ಲಿರುವ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಅವರು ಸೆಶನ್ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದು, “ನಾವು ದರ್ಶನ್‌ಗೆ ಮನೆ ಊಟ ಅಥವಾ 5 ಸ್ಟಾರ್ ಸೌಲಭ್ಯ ಕೇಳುತ್ತಿಲ್ಲ. ಆದರೆ, ಅವರಿಗೆ ಮೂಲಭೂತ ಸೌಲಭ್ಯವೇ ಸಿಗುತ್ತಿಲ್ಲ. ಜೈಲು ಮ್ಯಾನುಯಲ್ ಪ್ರಕಾರ, ಆರೋಪಿ ತನ್ನ ಖರ್ಚಿನಲ್ಲಿ ದಿಂಬು ಮತ್ತು ಹಾಸಿಗೆ ಪಡೆಯಬಹುದು. ಆದರೆ, ದರ್ಶನ್‌ಗೆ ಕೇವಲ ಒಂದು ಬೆಡ್‌ಶೀಟ್ ಮಾತ್ರ ನೀಡಲಾಗಿದೆ. ಈ ಶೀತ ಕಾಲದಲ್ಲಿ ದಿಂಬು-ಹಾಸಿಗೆ ಅಗತ್ಯ” ಎಂದು ಮನವಿ ಮಾಡಿದ್ದಾರೆ.

ಅವರ ಬೇಡಿಕೆಗೆ ಸಂಬಂಧಿಸಿದ ವಿಚಾರಣೆಯನ್ನು ಕೋರ್ಟ್ ಮುಂದೂಡಿದ್ದು, ಸೆಪ್ಟೆಂಬರ್ 2ರಂದು ತೀರ್ಪು ಹೊರ ಬೀಳುವ ನಿರೀಕ್ಷೆಯಿದೆ. ಇನ್ನೊಂದೆಡೆ, ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದು ಆಗಿದ್ದ ಪವಿತ್ರಾ ಗೌಡ, ಇದೀಗ ಕೆಳ ಹಂತದ ಕೋರ್ಟ್‌ನಲ್ಲಿ ಮತ್ತೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಅವರ ಪರ ವಕೀಲ ಬಾಲನ್ ವಾದ ಮಂಡಿಸಿದ್ದು, “ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಪ್ರಶ್ನಿಸುತ್ತಿಲ್ಲ. ಆದರೆ, ಅದರಲ್ಲಿ ತಾಂತ್ರಿಕ ಲೋಪವಿದೆ. ಹೀಗಾಗಿ, ಪವಿತ್ರಾ ಗೌಡ ಅವರಿಗೆ ಜಾಮೀನು ನೀಡಬೇಕು” ಎಂದು ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಾಸಿಕ್ಯೂಷನ್ ಪರ ವಕೀಲ ಸಚಿನ್ ಆಕ್ಷೇಪ ವ್ಯಕ್ತಪಡಿಸಿ, “ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿದೆ. ಹೀಗಾಗಿ, ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು” ಎಂದು ವಾದಿಸಿದ್ದಾರೆ. ಈ ಅರ್ಜಿಯ ಮೇಲಿನ ತೀರ್ಪು ಕೂಡ ಸೆಪ್ಟೆಂಬರ್ 2ಕ್ಕೆ ಮುಂದೂಡಲಾಗಿದೆ.

ಇದರೊಂದಿಗೆ, ದರ್ಶನ್ ಅವರನ್ನು ಬಳ್ಳಾರಿ ಜೈಲುಗೆ ಶಿಫ್ಟ್ ಮಾಡುವಂತೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಈ ವಿಚಾರಣೆಯನ್ನೂ ಅದೇ ದಿನಕ್ಕೆ ಮುಂದೂಡಲಾಗಿದೆ. ದರ್ಶನ್ ಪರ ವಕೀಲರು ತಾಯಿ ಅನಾರೋಗ್ಯ ಮತ್ತು ವಕೀಲರ ಭೇಟಿಗೆ ಆಗುವ ತೊಂದರೆಗಳನ್ನು ಉಲ್ಲೇಖಿಸಿ ಬಳ್ಳಾರಿ ಶಿಫ್ಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 2ರಂದು ಮೂವರು ಅರ್ಜಿಗಳ ಮೇಲಿನ ತೀರ್ಪು ಹೊರ ಬೀಳಲಿದ್ದು: ದರ್ಶನ್‌ಗೆ ಜೈಲಿನಲ್ಲಿ ಹೆಚ್ಚುವರಿ ಸೌಲಭ್ಯ ಸಿಗುತ್ತದೆಯೇ?, ಪವಿತ್ರಾ ಗೌಡ ಮತ್ತೆ ಜಾಮೀನು ಪಡೆಯುತ್ತಾರೆಯೇ?, ದರ್ಶನ್ ಬಳ್ಳಾರಿ ಜೈಲು ಶಿಫ್ಟ್ ಆಗುತ್ತಾರೆಯೇ? ಎಂಬ ಪ್ರಶ್ನೆಗಳ ಉತ್ತರ ಸಿಗಲಿದೆ. ಈ ಪ್ರಕರಣದ ಬೆಳವಣಿಗೆಗಳು ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿರುವುದು ನಿಜ.