Back to Top

ಬಿಗ್ ಬಾಸ್ ಕನ್ನಡ ಸೀಸನ್ 12: ಕಾಗೆ-ನರಿಯ ಹೊಸ ಕಥೆಯೊಂದಿಗೆ ಸುದೀಪ್ ಬಿಗ್ ಸರ್ಪ್ರೈಸ್!

SSTV Profile Logo SStv September 15, 2025
ಬಿಗ್​​ಬಾಸ್ 12: ಕಾಗೆ-ನರಿಯ ಕತೆ ಹೇಳಿದ ಸುದೀಪ್
ಬಿಗ್​​ಬಾಸ್ 12: ಕಾಗೆ-ನರಿಯ ಕತೆ ಹೇಳಿದ ಸುದೀಪ್

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಮತ್ತೆ ಬರಲು ಸಜ್ಜಾಗಿದೆ. 11 ಸೀಸನ್‌ಗಳ ಯಶಸ್ವಿ ಪ್ರಯಾಣದ ನಂತರ, ಇದೀಗ ಪ್ರೇಕ್ಷಕರು ಕಾಯುತ್ತಿರುವ ಸೀಸನ್ 12 ಸೆಪ್ಟೆಂಬರ್ 28ರಿಂದ ಪ್ರಸಾರವಾಗಲಿದೆ. ಇದರ ಇನ್ಯಾಗುರೇಷನ್ ಕಾರ್ಯಕ್ರಮ ಸಂಜೆ 6:30ಕ್ಕೆ ನಡೆಯಲಿದ್ದು, ಪ್ರತಿದಿನದ ಎಪಿಸೋಡ್‌ಗಳು ರಾತ್ರಿ 9:30ರಿಂದ 10:30ರವರೆಗೆ ಪ್ರಸಾರವಾಗಲಿವೆ.

ಈ ಬಾರಿ ಬಿಡುಗಡೆಯಾದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಒಂದು ವಿಶೇಷ ಕಥೆಯನ್ನು ಹೇಳಿಕೊಂಡಿದ್ದಾರೆ. ಎಲ್ಲರಿಗೂ ಪರಿಚಿತವಾದ ಕಾಗೆ ಮತ್ತು ನರಿಯ ಕಥೆ ಯನ್ನೇ ಅವರು ಆರಿಸಿಕೊಂಡಿದ್ದಾರೆ. ಆದರೆ ಟ್ವಿಸ್ಟ್ ಕೊಟ್ಟಿದ್ದು ಕಥೆಯ ಕ್ಲೈಮ್ಯಾಕ್ಸ್‌ನಲ್ಲಿ!ಸಾಮಾನ್ಯವಾಗಿ ಕಾಗೆ ಹಾಡಲು ಬಾಯಿತೆರೆದ ಕೂಡಲೇ ವಡೆ ಬಿದ್ದು ನರಿಯ ಹೊಟ್ಟೆ ಸೇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಅಂತ್ಯ. ಆದರೆ, ಸುದೀಪ್ ತಮ್ಮದೇ ಶೈಲಿಯಲ್ಲಿ ಅಂತ್ಯ ಬದಲಿಸಿ, ಕಾಗೆ ವಡೆಯನ್ನು ನೆಲಕ್ಕಿಟ್ಟು ಕಾಲಿನಿಂದ ಹಿಡಿದು ಹಾಡುವುದಾಗಿ ವಿವರಿಸಿದ್ದಾರೆ. ಹೀಗಾಗಿ ನರಿಯ ಯೋಜನೆ ವಿಫಲವಾಗಿ, ಅದು ಖಾಲಿಹಸ್ತದಿಂದ ಹಿಂತಿರುಗುತ್ತದೆ.

ಸುದೀಪ್ ಅವರ ಪ್ರಕಾರ, ಇದು ಕೇವಲ ಕಥೆಯ ಟ್ವಿಸ್ಟ್ ಅಲ್ಲ, ಬದಲಿಗೆ ಬಿಗ್ ಬಾಸ್ ಸೀಸನ್ 12ನ ಮುಖ್ಯ ಸಂದೇಶ. ಈವರೆಗೆ 11 ಸೀಸನ್‌ಗಳನ್ನು ನೋಡಿದ ಪ್ರೇಕ್ಷಕರು “ಇದೀಗ ನಮಗೆ ಬಿಗ್ ಬಾಸ್ ಅರ್ಥವಾಗಿದೆ, ಹೇಗೆ ನಡೆಯುತ್ತದೆ ಗೊತ್ತಿದೆ” ಎಂದುಕೊಂಡಿದ್ದಾರೆ. ಆದರೆ ಈ ಬಾರಿ ನಡೆಯುವ ಘಟನೆಗಳು ಯಾರೂ ನಿರೀಕ್ಷಿಸದಂತಿರುತ್ತವೆ. ಅಂದರೆ, ಪ್ರೇಕ್ಷಕರು ಮತ್ತು ಸ್ಪರ್ಧಿಗಳು ಎಂದಿಗೂ ಕಂಡಿರದ ಸರ್ಪ್ರೈಸ್‌ಗಳಿಗೆ ಸಜ್ಜಾಗಬೇಕು ಎಂಬುದು ಬಿಗ್ ಬಾಸ್ ತಂಡದ ಸಂದೇಶ.

ಏನು ವಿಶೇಷ ಸೀಸನ್ 12ರಲ್ಲಿ?:

  • ಸಂಪೂರ್ಣ ಹೊಸ ಕಾನ್ಸೆಪ್ಟ್ ಮತ್ತು ಟ್ವಿಸ್ಟ್‌ಗಳು
  • ಅನಿರೀಕ್ಷಿತ ಟಾಸ್ಕ್‌ಗಳು ಮತ್ತು ತಿರುವುಗಳು
  • ಅಭಿಮಾನಿಗಳಿಗೆ ಪ್ರತಿ ದಿನ ಶಾಕ್ ಮತ್ತು ಸರ್ಪ್ರೈಸ್
  • ಅದ್ಧೂರಿ ಇನ್ಯಾಗುರೇಷನ್ ಕಾರ್ಯಕ್ರಮ

ಪ್ರತಿ ಸೀಸನ್‌ನಂತೆ, ಈ ಬಾರಿ ಕೂಡ ಸ್ಪರ್ಧಿಗಳ ಪಟ್ಟಿ ಕುತೂಹಲ ಹುಟ್ಟಿಸಿದೆ. ಆದರೆ ಬಿಗ್ ಬಾಸ್ ಮ್ಯಾಜಿಕ್ ಸೀಸನ್ 12ರಲ್ಲಿ ಎಷ್ಟು ಭರ್ಜರಿಯಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಸೆಪ್ಟೆಂಬರ್ 28ರಿಂದಲೇ ಪ್ರೇಕ್ಷಕರು ಅನುಭವಿಸಲಿದ್ದಾರೆ. ಹೀಗಾಗಿ, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಗೆಯಂತೆ ಬುದ್ಧಿವಂತರಾಗದಿದ್ದರೆ ನರಿಯಂತೆ ಕೈತಪ್ಪಬಹುದು ಎಂಬುದನ್ನು ಸುದೀಪ್ ತಮ್ಮ ಕಥೆಯ ಮೂಲಕ ನೆನಪಿಸಿದ್ದಾರೆ.