Back to Top

“ನಾರ್ಥ್ ಇಂಡಿಯಾ ರೈಟ್ಸ್ ಎಎ ಫಿಲಂಸ್ ತೆಕ್ಕೆಗೆ – ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ‘ಕಾಂತಾರ-1’”

SSTV Profile Logo SStv September 6, 2025
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ‘ಕಾಂತಾರ-1’
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ‘ಕಾಂತಾರ-1’

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ ಚಾಪ್ಟರ್-1’ ಪ್ರೇಕ್ಷಕರ ಮನಸ್ಸಿನಲ್ಲಿ ಅಪಾರ ಕುತೂಹಲ ಮೂಡಿಸಿರುವ ಚಿತ್ರ. ಈಗಾಗಲೇ ಬಿಡುಗಡೆಯಾದ ಗ್ಲಿಂಪ್ಸ್, ಮೇಕಿಂಗ್ ವಿಡಿಯೋಗಳು ಮತ್ತು ಪೋಸ್ಟರ್‌ಗಳು ಸಿನಿಮಾ ಮೇಲೆ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿವೆ. 2022ರಲ್ಲಿ ಬಿಡುಗಡೆಯಾದ ಕಾಂತಾರ’ ಸಿನಿಮಾವೇ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಸೃಷ್ಟಿಸಿದ್ದರೆ, ಈ ಬಾರಿ ಪ್ರೇಕ್ವೆಲ್ ರೂಪದಲ್ಲಿ ಬರುವ `ಕಾಂತಾರ-1’ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆಗಳಿವೆ.

ಚಿತ್ರವು 2025ರ ಅಕ್ಟೋಬರ್ 2 ರಂದು ವಿಶ್ವಾದ್ಯಂತ ತೆರೆಗೆ ಬರಲಿದ್ದು, ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಹುಭಾಷಾ ಬಿಡುಗಡೆಯಿಂದಾಗಿ ದೇಶಾದ್ಯಂತ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ಚಿತ್ರ ಪ್ರಭಾವ ಬೀರುವ ನಿರೀಕ್ಷೆ ಇದೆ.

ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಚಿತ್ರದ ವಿತರಣೆಯನ್ನು ‘ಎಎ ಫಿಲಂಸ್’ ವಹಿಸಿಕೊಂಡಿದೆ. ಉತ್ತರ ಭಾರತದಲ್ಲಿ ಕಾಂತಾರ ಚಾಪ್ಟರ್-1’ ಭರ್ಜರಿ ಪ್ರಮಾಣದಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿದ್ದು, ದೇಶವ್ಯಾಪಿ ವೀಕ್ಷಕರ ಗಮನ ಸೆಳೆಯಲಿದೆ. `ಕಾಂತಾರ-1’ ಕೇವಲ ಒಂದು ಸಿನಿಮಾ ಮಾತ್ರವಲ್ಲ, ಇದು ಕ್ರಿ.ಶ 4ನೇ ಶತಮಾನದ ಸಂಸ್ಕೃತಿ, ಭೂಮಿ, ಪರಂಪರೆ ಮತ್ತು ವೈಭವವನ್ನು ತೆರೆಗೆ ತರುವ ಅದ್ಭುತ ಪ್ರಯತ್ನ. ಚಿತ್ರತಂಡವು ಐತಿಹಾಸಿಕ ಹಿನ್ನೆಲೆಯ ಕಥೆಯನ್ನು ಸಾಂದರ್ಭಿಕವಾಗಿ ಮೂಡಿಸಲು ಭಾರೀ ತಾರಾಗಣ, ವಿಶಿಷ್ಟ ದೃಶ್ಯ ವೈಭವ ಮತ್ತು ಅದ್ಭುತ ಸಂಗೀತವನ್ನು ಬಳಸಿಕೊಂಡಿದೆ.

ಹೊಂಬಾಳೆ ಫಿಲಂಸ್ ಎಂದರೆ ಮೆಗಾ ಕ್ಯಾಂವಾಸ್, ಅದ್ಭುತ ಮೇಕಿಂಗ್ ಮತ್ತು ತಾಂತ್ರಿಕ ನವೀನತೆ. `ಕಾಂತಾರ-1’ ಕೂಡ ಅದಕ್ಕೆ ಅಪವಾದವಲ್ಲ. ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುವ ಮನಮುಟ್ಟುವ ಸಂಗೀತ, ರೋಮಾಂಚಕ ದೃಶ್ಯ ವೈಭವ ಮತ್ತು ರಿಷಬ್ ಶೆಟ್ಟಿಯ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಈಗಾಗಲೇ 2025ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಪ್ರಾದೇಶಿಕ ಕಥೆಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವ ಹೊಂಬಾಳೆಯ ದೃಷ್ಟಿಕೋನವನ್ನು `ಕಾಂತಾರ-1’ ಮತ್ತಷ್ಟು ಬಲಪಡಿಸಲಿದೆ.

ಕಾಂತಾರ ಚಾಪ್ಟರ್-1 ಕೌಂಟ್‌ಡೌನ್ ಶುರುವಾಗಿದೆ. ಅಕ್ಟೋಬರ್ 2, 2025 ಈ ದಿನಾಂಕ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ, ಸಂಪೂರ್ಣ ಭಾರತೀಯ ಚಲನಚಿತ್ರರಂಗಕ್ಕೂ ಮಹತ್ವದ್ದಾಗಿದೆ. `ಕಾಂತಾರ ಚಾಪ್ಟರ್-1’ ಮೂಲಕ ಮತ್ತೊಂದು ಚರಿತ್ರೆ ಬರೆಯಲು ರಿಷಬ್ ಶೆಟ್ಟಿ ಸಜ್ಜಾಗಿದ್ದಾರೆ.