Back to Top

“ಜಾಗ ಬಿಟ್ಟು ಕೊಡಲ್ಲ, ಕಾನೂನು ಹೋರಾಟ ಮಾಡ್ತೀನಿ” – ಬಾಲಣ್ಣ ಪುತ್ರಿ ಗೀತಾ ಬಾಲಿ ಸಿಡಿದೆದ್ದರು

SSTV Profile Logo SStv September 6, 2025
ಗೀತಾ ಬಾಲಿ ಬಿಗ್ ಚಾಲೆಂಜ್ ಸರ್ಕಾರಕ್ಕೆ
ಗೀತಾ ಬಾಲಿ ಬಿಗ್ ಚಾಲೆಂಜ್ ಸರ್ಕಾರಕ್ಕೆ

2003 ರಲ್ಲಿ ಮಾರಾಟವಾದ ಜಮೀನಿನ ನಿಯಮಗಳು, ಅರಣ್ಯ ಇಲಾಖೆಯ ಹಸ್ತಕ್ಷೇಪ ಮತ್ತು ಬಾಲಣ್ಣ ಪುತ್ರಿ ಗೀತಾ ಬಾಲಿ ಅವರ ಪ್ರತಿಕ್ರಿಯೆಯಿಂದ ಅಭಿಮಾನ್ ಸ್ಟುಡಿಯೋ ವಿವಾದ ಇದೀಗ ಮತ್ತೆ ತೀವ್ರಗೊಳ್ಳುತ್ತಿದೆ. ಈ ಜಟಾಪಟಿಯಲ್ಲಿ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಭಾವನೆ ಮತ್ತೊಮ್ಮೆ ನೋವಿಗೆ ಗುರಿಯಾಗಿದೆ. ಹಿರಿಯ ನಟ ಬಾಲಕೃಷ್ಣ ಅವರು ಚಲನಚಿತ್ರರಂಗದ ಚಟುವಟಿಕೆಗಳಿಗೆ ನೆರವಾಗಲಿ, ಶೂಟಿಂಗ್‌ಗಳಿಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ಸ್ಟುಡಿಯೋ ನಿರ್ಮಾಣ ಮಾಡಲು ಸರ್ಕಾರದ ಸಹಾಯದೊಂದಿಗೆ 20 ಎಕರೆ ಜಮೀನು ಪಡೆದಿದ್ದರು. ಆದರೆ ಜಮೀನು ನೀಡುವ ಸಂದರ್ಭದಲ್ಲಿ ಸರ್ಕಾರವು ಕೆಲ ಷರತ್ತುಗಳನ್ನು ವಿಧಿಸಿತ್ತು.

ಆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಈಗ ಆ ಜಮೀನನ್ನು ಹಿಂಪಡೆಯಲು ಮುಂದಾಗಿದೆ. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಆದೇಶಿಸಿದೆ. ಈ ಬೆಳವಣಿಗೆ ಬಗ್ಗೆ ಬಾಲಣ್ಣ ಪುತ್ರಿ ಗೀತಾ ಬಾಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “2003 ರಲ್ಲೇ 10 ಎಕರೆ ಜಮೀನು ಮಾರಾಟವಾದಾಗ ಯಾವುದೇ ನಿಯಮ ಉಲ್ಲಂಘನೆ ಆಗಿರಲಿಲ್ಲ. ಈಗ ಮಾತ್ರ ಉಲ್ಲಂಘನೆ ಯಾಕೆ ಎಂದು ಹೇಳಲಾಗುತ್ತಿದೆ? ನಾನು ಈ ಜಮೀನು ಬಿಟ್ಟು ಕೊಡಲು ಸಿದ್ಧರಿಲ್ಲ. ಕಾನೂನು ಹೋರಾಟ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮಗೊಂಡಾಗಲೇ ಅಭಿಮಾನಿಗಳಿಗೆ ಆಘಾತ ಉಂಟಾಗಿತ್ತು. ಆ ಬಳಿಕ ಅಭಿಮಾನಿಗಳು ಕನಿಷ್ಠ ಅವರ ನೆಚ್ಚಿನ ನಾಯಕನ ಸ್ಮಾರಕ ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ನಿರ್ಮಾಣವಾಗಲಿ ಎಂದು ನಿರೀಕ್ಷಿಸಿದ್ದರು. ಆದರೆ ಇದೀಗ ಸರ್ಕಾರದ ಆದೇಶ ಮತ್ತು ಬಾಲಣ್ಣ ಕುಟುಂಬದ ಆಸ್ತಿ ವಿವಾದದಿಂದ ಆ ಕನಸು ಮತ್ತೊಮ್ಮೆ ಭಗ್ನವಾಗಿದೆ.

ಸೆಪ್ಟೆಂಬರ್ 18 ರಂದು ಡಾ.ವಿಷ್ಣುವರ್ಧನ್ 75ನೇ ಜನ್ಮದಿನವನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಅಡಿಗಲ್ಲು ಇಟ್ಟು, ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡುವ ಕನಸು ಕೂಡಿದ್ದರು. ಆದರೆ ಇದೀಗ ಬಾಲಣ್ಣ ಪುತ್ರಿ ಗೀತಾ ಬಾಲಿ ಸಿಡಿದೆದ್ದಿರುವುದರಿಂದ ಅಭಿಮಾನಿಗಳ ಕನಸು ಮತ್ತೆ ಅಸಾಧ್ಯವಾಗಿದೆ.

ಗೀತಾ ಬಾಲಿ ಸ್ಪಷ್ಟವಾಗಿ ಹೇಳಿರುವುದು: “ನಾನು ಸರ್ಕಾರದ ಆದೇಶವನ್ನೂ ಲೆಕ್ಕಿಸುವುದಿಲ್ಲ. ನ್ಯಾಯಾಲಯಕ್ಕೆ ಹೋಗುತ್ತೇನೆ. ಇದರ ಹಿಂದೆ ರಾಜಕೀಯ ಪ್ರಭಾವಿಗಳ ಮುಖವಾಡವಿದೆ. ಅದನ್ನೂ ಬಯಲಿಗೆಳೆಯುತ್ತೇನೆ” ಎಂದು ಸವಾಲು ಹಾಕಿದ್ದಾರೆ. ಅಭಿಮಾನಿಗಳು ಕನಸಿದ್ದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ಎದ್ದೇಳುತ್ತದೆಯೇ ಅಥವಾ ಜಮೀನು ವಿವಾದ ಇನ್ನಷ್ಟು ಗೊಂದಲ ಉಂಟುಮಾಡುತ್ತದೆಯೇ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಅಭಿಮಾನಿಗಳ ನಿರೀಕ್ಷೆ ಒಂದೇ “ಸಹಸಸಿಂಹನಿಗೆ ಸ್ಮಾರಕವಾಗಲಿ, ಸ್ಮರಣೆಯಾಗಲಿ; ವಿವಾದವಲ್ಲ”.