"10 ವರ್ಷ ಮದ್ಯ ಮುಟ್ಟದೇ ಬದುಕಿದ ಅರ್ಜುನ್ ಜನ್ಯ – ದೇವಿಯ ಅನುಗ್ರಹವೇ ಕಾರಣ"


ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ತಮ್ಮ ವಿಶಿಷ್ಟ ಸಂಗೀತ ಪ್ರತಿಭೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಅವರು, ಹಲವಾರು ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಕೂಡ ಪ್ರಸಿದ್ಧರು. ಆದರೆ, ಅವರ ಜೀವನದಲ್ಲಿ ಒಂದೊಮ್ಮೆ ಕತ್ತಲೆ ದಿನಗಳೂ ಇವೆ ಎಂಬುದನ್ನು ಅವರು ಸ್ವತಃ ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅರ್ಜುನ್ ಜನ್ಯ ಅವರು ತಮ್ಮ ಹಿಂದಿನ ಮದ್ಯ ವ್ಯಸನದ ಬಗ್ಗೆ, ತಂದೆಯ ಅಗಲಿಕೆಯಿಂದ ಬಂದ ಸಂಕಷ್ಟಗಳು ಹಾಗೂ ಆಧ್ಯಾತ್ಮಿಕ ಪಯಣದ ಕುರಿತು ಹಂಚಿಕೊಂಡಿದ್ದಾರೆ.
“ನಮ್ಮ ತಂದೆ ಹೋದಾಗ ತುಂಬಾ ಕಷ್ಟದ ಪರಿಸ್ಥಿತಿ ಎದುರಾಯಿತು. ಅದು ನನಗೆ ದೊಡ್ಡ ಪಾಠವಾಯಿತು,” ಎಂದು ಅರ್ಜುನ್ ಜನ್ಯ ಹೇಳಿದ್ದಾರೆ. ಆ ಸಂದರ್ಭದಲ್ಲಿ ಅವರು ಓಂ ಶಕ್ತಿ ಪೂಜೆಯ ಮೂಲಕ ಮನಸ್ಸಿಗೆ ಶಾಂತಿ ಪಡೆಯಲು ಆರಂಭಿಸಿದರು. ಅರ್ಜುನ್ ಜನ್ಯ ಅವರು 2005ರಲ್ಲಿ ಆದಿ ಪರಾಶಕ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ ಅನುಭವವೇ ತಮ್ಮ ಜೀವನವನ್ನು ಬದಲಿಸಿದ ಕ್ಷಣ ಎಂದು ಹೇಳಿದ್ದಾರೆ. “ದೇವಸ್ಥಾನಕ್ಕೆ ಕಾಲಿಟ್ಟಾಗ ಬಂಗಾರವಾಡಿಗಳು ಸಾಮಾನ್ಯರಂತೆ ನಡೆದುಕೊಂಡು ಬರುತ್ತಿದ್ದರು. ಅವರ ಕಾಲಿಟ್ಟು ಬಂದ ಮಣ್ಣನ್ನು ಜನರು ತಲೆಗೆ ಹಚ್ಚಿಕೊಳ್ಳುತ್ತಿದ್ದರು. ಆ ಬಳಿಕ ನಾನು ಅಮ್ಮನವರ ದರ್ಶನ ಮಾಡಿದೆ. ಆಗ ನನಗೆ ಏಕಾಏಕಿ ಕಣ್ಣೀರು ಬರುತ್ತಲೇ ಇತ್ತು. ಏಕೆ ಅಳುತ್ತಿದ್ದೇನೆಂಬುದೇ ತಿಳಿಯಲಿಲ್ಲ,” ಎಂದು ಅವರು ನೆನೆದಿದ್ದಾರೆ.
ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮದ್ಯ ಸೇವನೆ ಅವರ ಜೀವನದ ಭಾಗವಾಗಿತ್ತು. ಆದರೆ ದೇವಸ್ಥಾನಕ್ಕೆ ತೆರಳುವ ಮುನ್ನದ ದಿನದ ಅಪರಾಧ ಭಾವನೆ ಅವರಿಗೆ ಹೊಸ ನಿರ್ಧಾರ ತಂದುಕೊಟ್ಟಿತು. “ದೇವರ ದರ್ಶನದ ನಂತರ ನಾನು ಕುಡಿಯಲ್ಲ ಎಂದು ತೀರ್ಮಾನಿಸಿದೆ. ನನ್ನ ಗೆಳೆಯರಿಗೂ ತಿಳಿಸಿದೆ. ಅಲ್ಲಿಂದ ಮುಂದಿನ 10 ವರ್ಷ ಮದ್ಯವನ್ನೇ ಮುಟ್ಟಲಿಲ್ಲ,” ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ದೇವರ ದರ್ಶನದ ಬಳಿಕವೇ ತಮ್ಮ ಜೀವನದಲ್ಲಿ ಮೊದಲ ಸಂಗೀತದ ಅವಕಾಶ ಬಂದಿತೆಂದು ಅವರು ನಂಬುತ್ತಾರೆ.
“ಪ್ರತಿ ಕ್ಷಣದ ಉಸಿರಾಟ ಅಮ್ಮನವರದು. ಕಷ್ಟ ಬಂದರೂ ಏನೂ ಅನಿಸೋದಿಲ್ಲ. ಯಶಸ್ಸು ಬಂದರೂ ಹೆಚ್ಚೇನು ಅನಿಸುವುದಿಲ್ಲ,” ಎಂದು ಅರ್ಜುನ್ ಜನ್ಯ ಹೇಳಿದ್ದಾರೆ. ಅರ್ಜುನ್ ಜನ್ಯ ಅವರ ಈ ಹೃದಯಸ್ಪರ್ಶಿ ಅನುಭವವು ಕೇವಲ ಸಂಗೀತ ಕ್ಷೇತ್ರದಲ್ಲಷ್ಟೇ ಅಲ್ಲ, ಜೀವನದಲ್ಲಿ ಆಧ್ಯಾತ್ಮಿಕತೆ ಎಷ್ಟು ಮಹತ್ವದ್ದೆಂಬುದನ್ನು ತೋರಿಸುತ್ತದೆ. ಮದ್ಯದಂತಹ ವ್ಯಸನಗಳಿಂದ ದೂರವಿದ್ದು, ದೇವಿಯ ಭಕ್ತಿಯಿಂದ ಬದುಕಿನಲ್ಲಿ ಶಾಂತಿ, ಶಕ್ತಿ ಹಾಗೂ ಯಶಸ್ಸು ಗಳಿಸಬಹುದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
