Back to Top

ಎ.ವಿ.ವರದಾಚಾರ್ ಕಲಾಕ್ಷೇತ್ರದಲ್ಲಿ "ನನ್ನ ಮಗಳೇ ಸೂಪರ್ ಸ್ಟಾರ್" ಚಿತ್ರಕ್ಕೆ ಚಾಲನೆ; ಚಿತ್ರದ ಪ್ರಮುಖಪಾತ್ರದಲ್ಲಿ "ಸೀತಾರಾಮ" ಸೀರಿಯಲ್ ನ ಬೇಬಿ ರೀತುಸಿಂಗ್ ನಟನೆ

SSTV Profile Logo SStv September 9, 2025
ಎ.ವಿ.ವರದಾಚಾರ್ ಕಲಾಕ್ಷೇತ್ರದಲ್ಲಿ "ನನ್ನ ಮಗಳೇ ಸೂಪರ್ ಸ್ಟಾರ್" ಚಿತ್ರಕ್ಕೆ ಚಾಲನೆ
ಎ.ವಿ.ವರದಾಚಾರ್ ಕಲಾಕ್ಷೇತ್ರದಲ್ಲಿ "ನನ್ನ ಮಗಳೇ ಸೂಪರ್ ಸ್ಟಾರ್" ಚಿತ್ರಕ್ಕೆ ಚಾಲನೆ

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ "ಸೀತಾರಾಮ" ಸೀರಿಯಲ್ ನ ಮೂಲಕ ನೋಡುಗರ ಮನ ಗೆದ್ದಿದ್ದ ಬೇಬಿ ರೀತು ಸಿಂಗ್ ಈಗ "ನನ್ನ ಮಗಳೇ ಸೂಪರ್ ಸ್ಟಾರ್" ಎಂಬ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಶೇಷಾದ್ರಿಪುರದ ಎ.ವಿ.ವರದಾಚಾರ್ ಕಲಾಕ್ಷೇತ್ರದಲ್ಲಿ ನೆರವೇರಿತು. ಸಾಹಿತಿ ಬಿ.ಆರ್ ಲಕ್ಷ್ಮಣರಾವ್, ಪರಿಸರ ಪ್ರೇಮಿ ರೇವತಿ ಕಾಮತ್ ಹಾಗೂ ನಿರ್ದೇಶಕ ನಂಜುಂಡೇಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ಹನಿ ಫಿಲಂ ಮೇಕರ್ಸ್ ಲಾಂಛನದಲ್ಲಿ ಎನ್ ಎ.ಶಿವಕುಮಾರ್ (ಕುಮಾರ್ ನೊಣವಿನಕೆರೆ) ನಿರ್ಮಿಸುತ್ತಿರುವ ಈ ಚಿತ್ರವನ್ನು ಹಲವು ಚಿತ್ರಗಳಿಗೆ ಸಂಕಲನಕಾರರಾಗಿ‌ ದುಡಿದಿರುವ ಆಯುರ್ ನಿರ್ದೇಶಿಸುತ್ತಿದ್ದಾರೆ. ರೀತುಸಿಂಗ್, "ಭಜರಂಗಿ ೨" ಖ್ಯಾತಿಯ ‌ಚಲುವರಾಜ್, ಸಂಭ್ರಮಶ್ರೀ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಹೂರ್ತ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಅಪ್ಪ - ಅಮ್ಮನಿಗೆ‌ ತಮ್ಮ ಮಕ್ಕಳು ಸೂಪರ್ ಸ್ಟಾರ್ ಆಗಬೇಕೆಂಬ ಕನಸು. ಜೊತೆಗೆ ತಾವು ಅಂದುಕೊಂಡಂತೆ ಅವರು ಇರಬೇಕು ಎಂಬ ಆಸೆ. ಅದರಲ್ಲೂ ಈ ಸ್ವಭಾವ ತಾಯಿಗೆ ಸ್ವಲ್ಪ ಹೆಚ್ಚು. ಆದರೆ ಮಕ್ಕಳಿಗೂ ಅವರದೇ ಆಸೆ ಇರುತ್ತದೆ. ನಿಮ್ಮ ಆಸೆಯನ್ನು ಅವರ ಮೇಲೆ ಬಲವಂತವಾಗಿ ಅವರ ಮೇಲೆ ಹೇರಬೇಡಿ. ಅದರಿಂದ ಮಕ್ಕಳು ಏನೆಲ್ಲಾ ತೊಂದರೆ ಅನುಭವಿಸುತ್ತಾರೆ ಎಂಬ ಅಂಶವೇ ಈ ಚಿತ್ರದ ಕಥಾಹಂದರ. ರಿಯಾಲಿಟಿ ಶೋ ಕಥೆ ಕೂಡ ಇದೆ. ಇಂದು ಮುಹೂರ್ತ ನಡೆದಿದೆ. ಬೆಂಗಳೂರಿನಲ್ಲೆ ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ನಮ್ಮ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರು ಹಾಡುಗಳನ್ನು ಬಿ.ಆರ್.ಲಕ್ಷ್ಮಣರಾವ್ ಅವರೆ ಬರೆದಿದ್ದಾರೆ. ಕೆವಿನ್ ಸಂಗೀತ ನೀಡಿದ್ದಾರೆ. ಇನ್ನೂ ಈವರೆಗೂ ಸಾಕಷ್ಟು ಚಿತ್ರಗಳಿಗೆ ಸಂಕಲನ ಮಾಡಿರುವ ನಾನು, ಈ ಚಿತ್ರದ ಮೂಲಕ ನಿರ್ದೇಶಕನಾಗುತ್ತಿದ್ದೇನೆ ಎಂದು ನಿರ್ದೇಶಕ ಆಯುರ್ ತಿಳಿಸಿದರು.

ಈವರೆಗೂ ವಿಲನ್ ಪಾತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದ ನಾನು ಈ ಚಿತ್ರದ ಮೂಲಕ‌ ನಾಯಕನಾಗುತ್ತಿದ್ದೇನೆ ಹಾಗೂ ಈವರೆಗೂ ಮಾಡಿರದ ಪಾತ್ರ ಮಾಡುತ್ತಿದ್ದೇನೆ ಎಂದರು ನಟ ಚಲುವರಾಜ್. ನಿರ್ದೇಶಕರು ಹೇಳಿದ ಹಾಗೆ ಪೋಷಕರು ಹಾಗೂ ಮಕ್ಕಳು ನೋಡಲೇ ಬೇಕಾದ ಚಿತ್ರವಿದು. ನಾನು ಈ ಚಿತ್ರದ ನಾಯಕಿ. ಬೇಬಿ ರೀತುಸಿಂಗ್ ತಾಯಿಯಾಗಿ ಅಭಿನಯಿಸುತ್ತಿದ್ದೇನೆ ಎಂದು ನಟಿ ಸಂಭ್ರಮಶ್ರೀ ಹೇಳಿದರು. ಬಹಳ ದಿನಗಳ ನಂತರ ಚಲನಚಿತ್ರಕ್ಕೆ ಹಾಡು ಬರೆದಿದ್ದೇನೆ. ಅದರಲ್ಲೂ ಈ ಚಿತ್ರದ ಮೂರು ಹಾಡುಗಳನ್ನು ನಾನೇ ಬರೆದಿದ್ದೇನೆ ಎಂದು ಸಾಹಿತಿ ಬಿ.ಆರ್ ಲಕ್ಷ್ಮಣರಾವ್ ಹೇಳಿದರು.

ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು. ನಾನು ಕೂಡು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದರು ಪರಿಸರ ಪ್ರೇಮಿ ರೇವತಿ ಕಾಮತ್. ಹಿಂದಿನಿಂದ ನಮ್ಮ ಚಿತ್ರಗಳಿಗೆ ನೀವು ನೀಡುತ್ತಿರುವ ಪ್ರೋತ್ಸಾಹ ಈ ಚಿತ್ರದಲ್ಲೂ ಮುಂದುವರೆಯಲಿ ಎಂದು ನಿರ್ಮಾಪಕ ಎನ್ ಎ ಶಿವಕುಮಾರ್ ತಿಳಿಸಿದರು. ಮಾಧವಾನಂದ, ಪ್ರತಿಭಾ ಸಂಶಿಮಠ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.