Back to Top

‘ಕೊತ್ತಲವಾಡಿ’ ಪೇಮೆಂಟ್ ವಿವಾದ – ಯಶ್ ತಾಯಿಗೆ ತಲುಪಲಿ ಎಂದು ವಿಡಿಯೋ ಮಾಡಿದ ಮಹೇಶ್ ಗುರು

SSTV Profile Logo SStv September 16, 2025
ಪೇಮೆಂಟ್ ಬಾಕಿ ಆರೋಪಿಸಿ ವಿಡಿಯೋ ಮಾಡಿದ ಮಹೇಶ್ ಗುರು
ಪೇಮೆಂಟ್ ಬಾಕಿ ಆರೋಪಿಸಿ ವಿಡಿಯೋ ಮಾಡಿದ ಮಹೇಶ್ ಗುರು

‘ಕೊತ್ತಲವಾಡಿ’ ಸಿನಿಮಾ ಆಗಸ್ಟ್ 1ರಂದು ಅದ್ದೂರಿಯಾಗಿ ಬಿಡುಗಡೆಯಾಗಿ, ಬಳಿಕ ಒಟಿಟಿಯಲ್ಲೂ ಪ್ರೇಕ್ಷಕರಿಗೆ ತಲುಪಿದೆ. ಆದರೆ, ಈ ಸಿನಿಮಾದಲ್ಲಿ ನಟಿಸಿದ್ದ ಕಲಾವಿದ ಮಹೇಶ್ ಗುರು ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಮೂರು ತಿಂಗಳಿಗೂ ಹೆಚ್ಚು ಕಾಲ ಶೂಟಿಂಗ್‌ನಲ್ಲಿ ಭಾಗಿಯಾದರೂ ತಮಗೆ ಸಂಭಾವನೆ ಇನ್ನೂ ಸಿಕ್ಕಿಲ್ಲವೆಂದು ಅವರು ವಿಡಿಯೋ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

“ನನ್ನ ಹೆಸರು ಮಹೇಶ್ ಗುರು. ನಾನು ರಂಗಭೂಮಿ ಕಲಾವಿದ. ಸಿನಿಮಾ, ಧಾರಾವಾಹಿಗಳಲ್ಲೂ ಅಭಿನಯ ಮಾಡಿದ್ದೇನೆ. ‘ಕೊತ್ತಲವಾಡಿ’ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ಈ ಸಿನಿಮಾವನ್ನು ಯಶ್ ತಾಯಿ ಪುಷ್ಪ ಅವರು ನಿರ್ಮಿಸಿದ್ದರು. ನಿರ್ದೇಶಕ ಶ್ರೀರಾಜ್ ಅವರ ಮೂಲಕ ನಾನು ಆಯ್ಕೆ ಆಯಿದ್ದೆ. ಶೂಟಿಂಗ್ ಆರಂಭಕ್ಕೂ ಮೊದಲು ಅಡ್ವಾನ್ಸ್ ಕೊಡುತ್ತೇನೆ ಅಂತ ಹೇಳಿದ್ದರು, ಆದರೆ ಕೊಡಲಿಲ್ಲ. ಸಿನಿಮಾ ಮುಗಿದರೂ ಹಣ ಕೊಡಲಿಲ್ಲ. ಡಬ್ಬಿಂಗ್ ಮುಗಿದರೂ ಪೇಮೆಂಟ್ ಆಗಿಲ್ಲ” ಎಂದು ತಮ್ಮ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮಹೇಶ್ ಗುರು ಅವರ ಪ್ರಕಾರ, ಶೂಟಿಂಗ್ ಮುಗಿದ ನಂತರದಿಂದ ನಿರ್ದೇಶಕರನ್ನು ಕರೆ ಮಾಡಿದರೂ ಅವರು ಕಾಲ್‌ಗಳನ್ನು ಸ್ವೀಕರಿಸಿಲ್ಲ. ಟ್ರೇಲರ್, ಟೀಸರ್ ಈವೆಂಟ್‌ಗಳಿಗೆ ಆಹ್ವಾನ ಕೂಡ ನೀಡಲಾಗಲಿಲ್ಲ. ಇದೀಗ ಸಿನಿಮಾ ಒಟಿಟಿಗೆ ಬಂದರೂ ಸಂಭಾವನೆ ಪಾವತಿ ಆಗಿಲ್ಲವೆಂಬ ಅಸಮಾಧಾನವನ್ನು ಅವರು ಹೊರಹಾಕಿದ್ದಾರೆ. “ನಿರ್ಮಾಪಕರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ವಿಡಿಯೋ ಮಾಡುತ್ತಿದ್ದೇನೆ. ಇದು ಯಶ್ ತಾಯಿ ಪುಷ್ಪ ಅವರಿಗೆ ತಲುಪಬೇಕು. ಅವರು ಖಂಡಿತವಾಗಿಯೂ ಈ ವಿಷಯವನ್ನು ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ” ಎಂದು ಮಹೇಶ್ ಗುರು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

ಮಹೇಶ್ ಗುರು ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ, ಅನೇಕರು “ಈ ವಿಷಯ ಯಶ್ ತಾಯಿಗೆ ತಲುಪೋವರೆಗೂ ಶೇರ್ ಮಾಡಿ” ಎಂದು ಕಮೆಂಟ್ ಮಾಡಿದ್ದರು. ಆದರೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಆಗಿದೆ ಎನ್ನಲಾಗುತ್ತಿದೆ.

‘ಕೊತ್ತಲವಾಡಿ’ ಸಿನಿಮಾ ಯಶ್ ತಾಯಿ ಪುಷ್ಪ ಅವರ ನಿರ್ಮಾಣದಲ್ಲಿ ಮೂಡಿಬಂದ ಚಿತ್ರವಾಗಿದ್ದು, ಪೃಥ್ವಿ ಅಂಬರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಬಿಡುಗಡೆಯಾಗುವ ಮುನ್ನವೇ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಬಿಡುಗಡೆಯ ನಂತರ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿತ್ತು. ಈಗ ಪೇಮೆಂಟ್ ವಿವಾದದಿಂದ ಸಿನಿಮಾ ಮತ್ತೆ ಸುದ್ದಿಯಲ್ಲಿದೆ.