Back to Top

ಬುದ್ದಿವಂತ ಉಪೇಂದ್ರನನ್ನೇ ಯಾಮಾರಿಸಿದ ಹ್ಯಾಕರ್ – ಎಚ್ಚರಿಕೆ ನೀಡಿದ ಉಪ್ಪಿ & ಪ್ರಿಯಾಂಕ!

SSTV Profile Logo SStv September 15, 2025
ಹ್ಯಾಕರ್ ಬಲೆಗೆ ಸಿಕ್ಕ ಉಪ್ಪಿ & ಪ್ರಿಯಾಂಕ ಎಚ್ಚರಿಕೆ!
ಹ್ಯಾಕರ್ ಬಲೆಗೆ ಸಿಕ್ಕ ಉಪ್ಪಿ & ಪ್ರಿಯಾಂಕ ಎಚ್ಚರಿಕೆ!

ಚಿತ್ರರಂಗದಲ್ಲಿ ಸದಾ ಹೊಸ ಹೊಸ ಪ್ರಯೋಗಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ ರಿಯಲ್ ಸ್ಟಾರ್ ಉಪೇಂದ್ರ, ಇತ್ತೀಚೆಗೆ ಸ್ವತಃ ಹ್ಯಾಕರ್ ಬಲೆಗೆ ಸಿಕ್ಕಿದ್ದಾರೆ. ಹೌದು, "ಬುದ್ದಿವಂತ" ನಾಯಕನಾಗಿರುವ ಉಪ್ಪಿ ಮತ್ತು ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರ ಫೋನ್‌ಗಳನ್ನು ಚಾಲಾಕಿ ಹ್ಯಾಕರ್ ಹ್ಯಾಕ್ ಮಾಡಿದ್ದು, ಅಭಿಮಾನಿಗಳಲ್ಲಿ ಹಾಗೂ ಸ್ನೇಹಿತರಲ್ಲಿ ಗೊಂದಲ ಸೃಷ್ಟಿಸಿದೆ.

ಸೆಪ್ಟೆಂಬರ್ 18ರಂದು ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದ ತಯಾರಿ ನಡೆಯುತ್ತಿದ್ದಂತೆಯೇ, ಬೆಳಗ್ಗೆ ಅಪರಿಚಿತ ನಂಬರ್‌ನಿಂದ ಬಂದ ಕರೆ ಪ್ರಿಯಾಂಕ ಉಪೇಂದ್ರ ಅವರ ಫೋನ್‌ಗೆ ಬಿದ್ದಿತು. ಫರ್ನಿಚರ್ ಡೆಲಿವರಿ ಹೆಸರಿನಲ್ಲಿ ಬಂದಿದ್ದ ಈ ಕರೆ ವೇಳೆ, ಹ್ಯಾಕರ್ "ಡಿಲಿವರಿ ಕೋಡ್" ಕೇಳಿದ್ದ. ಪ್ರಿಯಾಂಕ ಅವರು ನಿಜವಾಗಿಯೇ ಕೋಡ್ ಇರಬಹುದು ಎಂದುಕೊಂಡು ಹೇಳಿದ ತಕ್ಷಣ, ಅವರ ಫೋನ್ ಹ್ಯಾಂಗ್ ಆಗಿ ಹ್ಯಾಕ್ ಆಯಿತು.

ಇದರಲ್ಲೇ ನಿಲ್ಲದೆ, ಉಪೇಂದ್ರ ತಮ್ಮ ಫೋನ್‌ನ್ನು ಪ್ರಿಯಾಂಕ ಅವರಿಗೆ ಕೊಟ್ಟಾಗ, ಅದನ್ನೂ ಹ್ಯಾಕರ್ ಹ್ಯಾಕ್ ಮಾಡಲು ಯಶಸ್ವಿಯಾದ. ಹೀಗಾಗಿ ಉಪ್ಪಿ ಮತ್ತು ಪ್ರಿಯಾಂಕ ಇಬ್ಬರ ಫೋನ್‌ಗಳನ್ನೂ ಹ್ಯಾಕರ್ ಹಿಡಿಯುವಲ್ಲಿ ಯಶಸ್ವಿಯಾದ.

ಈ ಘಟನೆ ನಂತರ ಉಪೇಂದ್ರ ತಮ್ಮ ಅಭಿಮಾನಿಗಳು ಮತ್ತು ಸಿನಿ ಸ್ನೇಹಿತರನ್ನು ಎಚ್ಚರಿಸಿದ್ದಾರೆ: “ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ, ಯಾರು ಕೂಡ ಕಳುಹಿಸಬೇಡಿ. ಅದು ನಾವಲ್ಲ. ಮೋಸಕ್ಕೆ ಒಳಗಾಗಬೇಡಿ.”

ಅದೇ ರೀತಿ ಪ್ರಿಯಾಂಕ ಉಪೇಂದ್ರ ಕೂಡ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ: “ಅಪರಿಚಿತ ನಂಬರ್‌ನಿಂದ ಬಂದ ಮೆಸೇಜ್ ಅಥವಾ ಲಿಂಕ್‌ಗಳನ್ನು ನಂಬಬೇಡಿ. ನಾವು ಸೈಬರ್ ಕ್ರೈಮ್‌ಗೆ ದೂರು ನೀಡಿದ್ದೇವೆ.” ಈ ಘಟನೆ ನಂತರ ಉಪೇಂದ್ರ-ಪ್ರಿಯಾಂಕ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದಾರೆ. ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಹ್ಯಾಕರ್ ಪತ್ತೆಯಾಗುವ ನಿರೀಕ್ಷೆ ಇದೆ.

ಈ ಘಟನೆ ಮತ್ತೊಮ್ಮೆ ಎಚ್ಚರಿಸುತ್ತಿದೆ ಹ್ಯಾಕರ್‌ಗಳು ಕೇವಲ ಸಾಮಾನ್ಯ ಜನರನ್ನೇ ಅಲ್ಲ, ಸ್ಟಾರ್‌ಗಳನ್ನೂ ಬಲೆಗೆ ಸೆಳೆಯುತ್ತಾರೆ. ಅಪರಿಚಿತ ನಂಬರ್‌ನಿಂದ ಬಂದ ಮೆಸೇಜ್‌ಗಳು, ಲಿಂಕ್‌ಗಳು ಅಥವಾ OTP/ಡಿಲಿವರಿ ಕೋಡ್‌ಗಳನ್ನು ಯಾವತ್ತೂ ಹಂಚಬಾರದು. ಒಂದು ಸಣ್ಣ ತಪ್ಪು, ದೊಡ್ಡ ಮೋಸಕ್ಕೆ ಕಾರಣವಾಗಬಹುದು.

 ಹೀಗಾಗಿ ನೀವು ಸಹ ಎಚ್ಚರಿಕೆಯಿಂದಿರಿ. ರಿಯಲ್ ಸ್ಟಾರ್ ಉಪ್ಪಿಯೇ ಹ್ಯಾಕ್ ಆಗಿದ್ದರೆ, ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬಹುದು ಎಂಬುದು ಊಹಿಸಲು ಕಷ್ಟವಿಲ್ಲ!