'ಡೆವಿಲ್' ಶೂಟಿಂಗ್ ವೇಳೆ ಬೆನ್ನುನೋವಿನಿಂದ ಕುಸಿದ ಬಿದ್ದಿದ್ದ ದರ್ಶನ್: ವೈರಲ್ ಆದ ವೀಡಿಯೋ


ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಸುತ್ತುವರಿದ ವಿವಾದಗಳು ನಿಂತಿಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧಿತರಾದ ನಂತರ ಹಲವು ಹಂತಗಳಲ್ಲಿ ಜಾಮೀನು ಪಡೆದು ಹೊರ ಬಂದಿದ್ದ ದರ್ಶನ್, ಇದೀಗ ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತೆ ಜೈಲಿನಲ್ಲಿ ಇರಬೇಕಾಗಿದೆ. ಈ ನಡುವೆ, ಅವರ ಆರೋಗ್ಯ ಮತ್ತು ವಿಶೇಷವಾಗಿ ಬೆನ್ನು ನೋವು ಕುರಿತ ಚರ್ಚೆಗಳು ಮರುಕಳಿಸುತ್ತಿವೆ.
ಕಳೆದ ವರ್ಷ ಜೂನ್ 11ರಂದು ದರ್ಶನ್ ಬಂಧಿತರಾದ ಬಳಿಕ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರಿಗೆ ರಾಜಾತಿಥ್ಯ ಸಿಕ್ಕಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ತಿಳಿದುಬಂದಿತು. ವಕೀಲರ ವಾದದ ಮೇರೆಗೆ ಸರ್ಜರಿ ಅಗತ್ಯವೆಂದು ಹೇಳಿ ಅವರಿಗೆ ಮಧ್ಯಂತರ ಜಾಮೀನು ದೊರೆಯಿತು. ಅಕ್ಟೋಬರ್ 30ರಂದು ಬಿಡುಗಡೆಗೊಂಡ ಅವರು, ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರೂ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆ ನಡೆಸಲಿಲ್ಲ.
ಮಧ್ಯಂತರ ವಿಶ್ರಾಂತಿ ಪಡೆದ ಬಳಿಕ ದರ್ಶನ್ ಮಾರ್ಚ್‌ನಲ್ಲಿ ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕೆ ಹಾಜರಾದರು. ಆದರೆ ಅಲ್ಲಿ ಸಹ ಅವರು ಬೆನ್ನು ನೋವಿನಿಂದ ತೀವ್ರವಾಗಿ ಕಂಗೆಟ್ಟಿದ್ದರು. ಚಿತ್ರದ ಸಂಭಾಷಣೆ ಬರೆದಿರುವ ಕಾಂತರಾಜ್ ಅವರು ಸಂದರ್ಶನವೊಂದರಲ್ಲಿ ಹೇಳುವಂತೆ, ಶೂಟಿಂಗ್ ಸಮಯದಲ್ಲಿ ದರ್ಶನ್ ನೋವು ತಾಳಲಾರದೆ ಸೆಟ್‌ನಲ್ಲೇ ಮಲಗಿಬಿಟ್ಟಿದ್ದರು.
ಈ ಸಂದರ್ಭದ ಮೇಕಿಂಗ್ ವೀಡಿಯೋ ಈಗ ಅಭಿಮಾನಿಗಳ ಕೈಯಲ್ಲಿ ವೈರಲ್ ಆಗುತ್ತಿದೆ. “ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಬೆನ್ನು ನೋವಿನಲ್ಲೂ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು” ಎಂದು ಫ್ಯಾನ್ಸ್ ಭಾವುಕರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಬೆನ್ನು ನೋವನ್ನು ಆಧಾರ ಮಾಡಿಕೊಂಡು ಸರ್ಜರಿ ಮಾಡಿಸಬೇಕೆಂದು ಹೇಳಿ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ ಬಳಿಕ ಅವರು ವಿದೇಶಗಳಿಗೆ ತೆರಳಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರಿಂದ, ಈ ಕಾರಣ ಸಮಂಜಸವಲ್ಲವೆಂದು ಸರ್ಕಾರಿ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು. ಅವರ ವಿರುದ್ಧದ ಸಾಕ್ಷ್ಯವಾಗಿ ವೀಡಿಯೋ ಮತ್ತು ಫೋಟೋಗಳನ್ನು ಸಲ್ಲಿಸಲಾಯಿತು. ಇದು ಜಾಮೀನು ರದ್ದು ಮಾಡಲು ಕಾರಣಗಳಲ್ಲಿ ಒಂದೆಂದು ಹೇಳಲಾಗುತ್ತಿದೆ.
ಇಂದು ಕೂಡ ದರ್ಶನ್ ನಿಜವಾಗಿಯೂ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂಬುದನ್ನು ತೋರಿಸಲು ಅಭಿಮಾನಿಗಳು ಆ ವೀಡಿಯೋವನ್ನು ಹಂಚುತ್ತಿದ್ದಾರೆ. “ನಮ್ಮ ಸ್ಟಾರ್ ನೋವಿನಲ್ಲೂ ಕೆಲಸ ಮಾಡಿದರು” ಎಂಬ ಭಾವೋದ್ರಿಕ್ತ ಪ್ರತಿಕ್ರಿಯೆಗಳು ಬರುತ್ತಿವೆ.
ದರ್ಶನ್ ಅವರ ಪ್ರಕರಣ ಮತ್ತು ಆರೋಗ್ಯ ಸಂಬಂಧಿತ ಸಂಗತಿಗಳು ಇನ್ನೂ ಚರ್ಚೆಯಲ್ಲಿದ್ದು, ಅವರ ಬೆನ್ನು ನೋವು ನಿಜವೇ? ಅಥವಾ ಕಾನೂನು ಹಾದಿಯಲ್ಲಿ ಬಳಸಿದ ವಾದವೋ? ಎಂಬ ಪ್ರಶ್ನೆ ಮುಂದುವರಿದಿದೆ. ಆದರೆ ಅಭಿಮಾನಿಗಳ ದೃಷ್ಟಿಯಲ್ಲಿ, ನೋವಿನಲ್ಲೂ ಕೆಲಸ ಮಾಡಿದ ದರ್ಶನ್ ಅವರ ಸಮರ್ಪಣೆ ಇನ್ನೂ ಮೆಚ್ಚುಗೆಯ ವಿಷಯವಾಗಿದೆ.