ಟ್ರೋಲ್ನಿಂದ ಅವರ ಹೊಟ್ಟೆ ತುಂಬುತ್ತೆ ಅಂದ್ರೆ ವಿರೋಧ ಯಾಕೆ? – ದರ್ಶನ್ ಅಭಿಮಾನಿಗಳಿಗೆ ಜೋಗಿ ಪ್ರೇಮ್ ತಿರುಗೇಟು


ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಟ ಜೋಗಿ ಪ್ರೇಮ್, ತಮ್ಮ ನೇರ ನುಡಿಗಳಿಗಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಕೆಡಿ ಚಿತ್ರದ ಬಿಡುಗಡೆ ಸಿದ್ಧತೆ ಮತ್ತು ತಮ್ಮ ಹೊಸ ಹಾಡಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಅವರು ದರ್ಶನ್ ಅಭಿಮಾನಿಗಳ ಟ್ರೋಲ್ ಸಂಸ್ಕೃತಿ ಹಾಗೂ ಸಾಮಾಜಿಕ ಜವಾಬ್ದಾರಿಯ ಕುರಿತಾಗಿ ಸ್ಪಷ್ಟ ಸಂದೇಶವನ್ನೂ ನೀಡಿದರು. ಪ್ರೇಮ್ ತಮ್ಮ ಲೈಫ್ ಟು ಡೇ ಚಿತ್ರದ ಹಾಡಿನ ರೆಕಾರ್ಡಿಂಗ್ ಬಗ್ಗೆ ಮಾತನಾಡಿ, "ನೀನೇ ಬೇಕಿತ್ತಾ" ಎಂಬ ಲವ್ ಸಾಂಗ್‌ಗೆ ತಮ್ಮ ಧ್ವನಿ ನೀಡಿದ್ದಾರೆ ಎಂದು ತಿಳಿಸಿದರು. “ನನಗೆ ಹಾಡು ಹೇಳಲು ಕೇಳಿಸಿಕೊಳ್ಳುತ್ತಾರೆ, ಆದರೆ ನಾನು ಎಲ್ಲಾ ಹಾಡುಗಳನ್ನು ಹಾಡುವುದಿಲ್ಲ. ಜನಪದ ಶೈಲಿಯಿಂದ ಬಂದ ನಾನು ಆಯ್ಕೆ ಮಾಡಿದ ಹಾಡುಗಳನ್ನೇ ಹಾಡುತ್ತೇನೆ. ಈ ಬಾರಿಯೂ ಅದೇ ರೀತಿಯ ಪ್ರಯತ್ನ,” ಎಂದು ಪ್ರೇಮ್ ಹೇಳಿದರು.
ಸುದ್ದಿಗೋಷ್ಠಿಯ ಪ್ರಮುಖ ಅಂಶವೆಂದರೆ ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರೇಮ್ ನೀಡಿದ ಪ್ರತಿಕ್ರಿಯೆ. “ಟ್ರೋಲ್ ಅನ್ನೋದು ಕೆಲವರ ಹೊಟ್ಟೆ ತುಂಬಿಸೋ ಉದ್ಯಮ. ಅವರಿಗೆ ಅದು ನಾಲ್ಕು ಕಾಸು ತರುತ್ತೆ ಅಂದ್ರೆ ನಾವು ಯಾಕೆ ವಿರೋಧ ಮಾಡೋದು? ಆದರೆ ಕೆಟ್ಟದಾಗಿ ಟ್ರೋಲ್ ಮಾಡಬಾರದು. ವಿಶೇಷವಾಗಿ ಹೆಣ್ಣುಮಕ್ಕಳಿಗೆ ನೋವು ಕೊಡುವ ಟ್ರೋಲ್ ಮಾಡುವುದು ಸರಿಯಲ್ಲ. ಗಂಡು ಮಕ್ಕಳು ಹೇಗಾದರೂ ನಿಭಾಯಿಸ್ತಾರೆ, ಆದರೆ ಹೆಣ್ಣುಮಕ್ಕಳ ಬಗ್ಗೆ ಮಾತ್ರ ಜಾಗ್ರತೆ ಇರಬೇಕು,” ಎಂದು ಸ್ಪಷ್ಟವಾಗಿ ಹೇಳಿದರು.
ಅವರು ಇನ್ನೂ ಮುಂದುವರಿದು, “ದರ್ಶನ್ ಅವರು ಎಷ್ಟು ನೋವು ಅನುಭವಿಸುತ್ತಿರಬಹುದು ಅನ್ನೋದು ಅವರಿಗೆ ಮಾತ್ರ ಗೊತ್ತು. ಕೆಲವರು ಸ್ಯಾಡಿಸ್ಟಿಕಾಗಿ ಅವರನ್ನು ಬೈಯುತ್ತಾರೆ. ಆದರೆ ನೋವು ಅಂದ್ರೆ ಅವರ ಹೃದಯದಲ್ಲಿ ಇದೆ. ನಾನು ದರ್ಶನ್ ಅವರನ್ನು ಎರಡು ಬಾರಿ ಭೇಟಿಯಾಗಿದ್ದೇನೆ,” ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರೇಮ್ ತಮ್ಮ ಅಮ್ಮನ ತೋಟದ ತುಪ್ಪ ವ್ಯವಹಾರದ ಬಗ್ಗೆ ಹೇಳಿಕೊಂಡರು. “ನಮ್ಮ ಅಮ್ಮನು ಮಾಡುವ ತುಪ್ಪದಲ್ಲಿ ಯಾವುದೇ ಕೆಮಿಕಲ್ ಇಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಆಶಯದಿಂದ ಈ ಕಾರ್ಯ ನಡೆಯುತ್ತಿದೆ. ನಾನು ಹಾಡಿ ಗಳಿಸುವ ಹಣವನ್ನು ಸಹ ಸಮಾಜಮುಖಿ ಕಾರ್ಯಗಳಿಗೆ ಬಳಸುತ್ತೇನೆ. ಟ್ರಸ್ಟ್ ಮೂಲಕ ಅದನ್ನು ಹಂಚಲಾಗುತ್ತದೆ,” ಎಂದು ಅವರು ಹೇಳಿದರು.
ಜೋಗಿ ಪ್ರೇಮ್ ತಮ್ಮ ನೇರ ಮಾತುಗಳ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಟ್ರೋಲ್ ಸಂಸ್ಕೃತಿ ಬಗ್ಗೆ ಅವರ ಎಚ್ಚರಿಕೆ, ಹೆಣ್ಣುಮಕ್ಕಳಿಗೆ ನೀಡಿದ ಗೌರವ ಹಾಗೂ ದರ್ಶನ್ ಬಗ್ಗೆ ತೋರಿದ ಸಹಾನುಭೂತಿ ಅಭಿಮಾನಿಗಳ ಗಮನ ಸೆಳೆದಿದೆ. ಜೊತೆಗೆ, ತಮ್ಮ ಕುಟುಂಬದ ಆರ್ಗಾನಿಕ್ ವ್ಯವಹಾರ ಮತ್ತು ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಹಂಚಿಕೊಂಡ ವಿಚಾರಗಳು ಅವರ ವಿಭಿನ್ನ ವ್ಯಕ್ತಿತ್ವವನ್ನು ಮೆರೆಯುತ್ತವೆ.
Trending News
ಹೆಚ್ಚು ನೋಡಿಚಿತ್ರಸಾಹಿತಿ ನಾಗಾರ್ಜುನ್ ಶರ್ಮಾ ಹೊಸ ಪ್ರಯತ್ನ... ಶುಭಾಶಯ ಆಲ್ಬಂ ಸಾಂಗ್ನಲ್ಲಿ ಮಿಂಚಿದ ಪೃಥ್ವಿ-ಅಂಜಲಿ
